ADVERTISEMENT

ಕರ್ನಾಟಕಕ್ಕೇ ‘ಸಿದ್ದರಾಮಯ್ಯ’ ಅಂತಾ ಹೆಸರಿಟ್ಟು ಬಿಡಲಿ: ಎಚ್‌ಡಿಕೆ ವ್ಯಂಗ್ಯ

ಕೆಆರ್‌ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಾಮಕರಣ ಪ್ರಸ್ತಾವದ ಕುರಿತು ಶನಿವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 11:19 IST
Last Updated 4 ಜನವರಿ 2025, 11:19 IST
ಎಚ್‌ಡಿಕೆ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ
ಎಚ್‌ಡಿಕೆ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ   

ಮೈಸೂರು: ‘ಸಿದ್ದರಾಮಯ್ಯ ಹೆಸರನ್ನು ದೇವನೂರು ಬಡಾವಣೆಯ ಕೆಸರೆ ಗ್ರಾಮಕ್ಕೆ ಇಡಲಿ. ಅಲ್ಲಿಯೇ ಅಲ್ಲವೇ ಅವರು ಬಹುದೊಡ್ಡ ಸಾಧನೆ ಮಾಡಿರುವುದು? ಇಡೀ ಕರ್ನಾಟಕಕ್ಕೆ ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ರಾಜ್ಯಕ್ಕೂ ಅವರ ಹೆಸರನ್ನೇ ಇಟ್ಟುಬಿಡಲಿ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.

ಕೆಆರ್‌ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಾಮಕರಣ ಪ್ರಸ್ತಾವದ ಕುರಿತು ಇಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೈಸೂರು ಮಹಾರಾಜರ ಮನೆತನಕ್ಕೆ ಈ ಸರ್ಕಾರ ಅಪಮಾನ ಮಾಡುತ್ತಿದೆ ಏಕೆ’ ಎಂದು ಕೇಳಿದರು.

‘ಈ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದ್ದರೂ ಸಿದ್ದರಾಮಯ್ಯ ಜಾಣ ಮೌನದಲ್ಲಿದ್ದಾರೆ. ಬೆಂಬಲಿಗರನ್ನು ಛೂ ಬಿಟ್ಟು, ಚಿತಾವಣೆ ಮಾಡಿ ರಸ್ತೆಗೆ ಹೆಸರಿಟ್ಟಿಸಿಕೊಳ್ಳುತ್ತಿದ್ದಾರೆ. ಹೆಸರಿನ ರಾಜಕಾರಣವನ್ನು ಸಿದ್ದರಾಮಯ್ಯ ಕೈ ಬಿಡಬೇಕು’ ಎಂದರು.

ADVERTISEMENT

‘ನಾನು ಈ ಹಿಂದೆ ಬಿಜೆಪಿ ಜೊತೆ ಸರ್ಕಾರ ಮಾಡಿದ್ದೆ. ಮುಖ್ಯಮಂತ್ರಿಯಾಗಿ ನಾನು ಮೈಸೂರಿಗೆ ಎಷ್ಟು ಕೊಡುಗೆ ನೀಡಿದ್ದೇನೆ? ಡಿಸಿಎಂ, ವಿಧಾನಸಭೆ ವಿರೋಧಪಕ್ಷದ ನಾಯಕ ಹಾಗೂ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೈಸೂರಿಗೆ ಏನೇನು ಕೊಡುಗೆ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಚರ್ಚೆಯಾಗಲಿ’ ಎಂದು ಸವಾಲು ಹಾಕಿದರು.

‘2006-2007ರಲ್ಲಿ ನಾನು ಮೈಸೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಎಷ್ಟು ಮನೆ ಮಂಜೂರು ಮಾಡಿದ್ದೇನೆ, ಎಷ್ಟು ರಾಜಕಾಲುವೆ ಅಭಿವೃದ್ಧಿಡಿಸಿದ್ದೇನೆ, ಜೆ–ನರ್ಮ್ ಯೋಜನೆ ಮೂಲಕ ₹2ಸಾವಿರ ಕೋಟಿ ಅನುದಾನವನ್ನು ಮೈಸೂರಿಗೆ ತಂದಿದ್ದೇನೆ. ಅದೆಲ್ಲ ಮಾಡಿದ್ದು ನಾನೇ ಎಂದು ಎಲ್ಲಾದರೂ ಹೇಳಿದ್ದೇನೆಯೇ? ಅದಕ್ಕೆಂದು ಹಾದಿ–ಬೀದಿಗೆ ನನ್ನ ಹೆಸರಿಡಿ ಎಂದು ಕೇಳಲಾಗುತ್ತದೆಯೇ? ನಾವೇನು ಕೆಲಸ ಮಾಡಿದ್ದೇವೆ ಎಂಬ ಆತ್ಮತೃಪ್ತಿ ಇರಬೇಕು; ಅದು ಜನರ ಹೃದಯದಲ್ಲಿರಬೇಕು’ ಎಂದರು.

ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿರುವ ಬಗ್ಗೆ ಸಚಿವರು ಕಿಡಿಕಾರಿದರು.

‘ಪ್ರಯಾಣದರ ಹೆಚ್ಚಳದ ಹೊರೆ ಏನಿದ್ದರೂ ಜನಕ್ಕೆ ತಾನೇ? ಮಂತ್ರಿಗಳಿಗಲ್ಲವಲ್ಲ. ಅವರಿಗೇನಾಗಬೇಕು? ಜನರ ಜೇಬಿಗೆ ಕೈ ಹಾಕಿ ಲೂಟಿ ಮಾಡುತ್ತಿದ್ದಾರೆ. ವೋಟು ಹಾಕಿ ಅಧಿಕಾರ ಕೊಟ್ಟ ಜನರಿಗೆ ಕಷ್ಟ ಕೊಟ್ಟು ಖುಷಿಪಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘‌ಐದು ಗ್ಯಾರಂಟಿಗಳಿಗೆ ಈ ಸರ್ಕಾರದ ಇಬ್ಬರು ಮಹನೀಯರು ಸಹಿ ಹಾಕಿದ್ದರು. ಸಿದ್ದರಾಮಯ್ಯ ಅವರೂ ಸಹಿ ಮಾಡಿದ್ದರು. ಇನ್ನೊಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾನು ಮಾತನಾಡಲ್ಲ. ನಮ್ಮ ದೇಶದಲ್ಲಿ ಮನಮೋಹನ್ ಸಿಂಗ್ ಅವರ ನಂತರ ಸಿದ್ದರಾಮಯ್ಯನವರೇ ದೊಡ್ಡ ಆರ್ಥಿಕ ತಜ್ಞರಲ್ಲವೇ? ಅವರೂ ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿದ್ದಾರೆ. ಆದರೆ, ಅವರ ಸರ್ಕಾರದಲ್ಲಿ ಜನರ ಅಭಿವೃದ್ಧಿಯಾಗುವುದು ಬಿಟ್ಟು ಮಂತ್ರಿಗಳ ಅಭಿವೃದ್ಧಿ ಆಗುತ್ತಿದೆ. ಜನರ ಅಭಿವೃದ್ಧಿ ಇವರಿಗೆ ಬೇಕಿಲ್ಲ. ಎಲ್ಲದಕ್ಕೂ ಪರ್ಸಂಟೇಜ್ ಕೇಳುತ್ತಾರೆ. ಆಶ್ರಯ ಮನೆಗಳಿಗೂ ವಿಧಾನಸೌಧದಲ್ಲಿ ವಸೂಲಿ ಶುರುವಾಗಿದೆ ಎನ್ನುವ ಮಾಹಿತಿ ಇದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.