ಬೆಂಗಳೂರು: ತಟಸ್ಥ ಎಂದು ಹೇಳಿಕೊಳ್ಳುವ ನಾಯಕರು ಮೊದಲಿಗೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ತೇಜೋವಧೆ ಮಾಡುತ್ತಿರುವವರ ಬಾಯಿ ಮುಚ್ಚಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷಕ್ಕೆ ಯಡಿಯೂಪ್ಪ ಅವರ ಕೊಡುಗೆ ಇಲ್ಲವೇ ಎಂದು ಪ್ರಶ್ನಿಸಿದರು.
ನಾನು ಯಾವುದೇ ಅಪಮಾನ ಸಹಿಸಿಕೊಳ್ಳಲು ತಯಾರಿದ್ದೇನೆ. ಪಕ್ಷಕ್ಕೆ ದುಡಿದ ಯಡಿಯೂರಪ್ಪ ಅವರನ್ನು ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲ. ತಟಸ್ಥ ಎಂದು ಹೇಳಿಕೊಳ್ಳುವವರು ಮತ್ತು ಪಕ್ಷ ಬೆಳವಣಿಗೆ ಬೇಸರ ತಂದಿದೆ ಎಂದು ಹೇಳುವವರು ಯಾಕೆ ಸುಮ್ಮನಿದ್ದಾರೆ? ಮಧ್ಯಸ್ಥಿಕೆ ಯಾಕೆ ವಹಿಸುತ್ತಿಲ್ಲ? ತಟಸ್ಥ ಬಣದ ಬಗ್ಗೆಯೂ ಗೊತ್ತು ಎಂದು ಹೇಳಿದರು.
ಇವೆಲ್ಲ ಸರಿಪಡಿಸಲು ಪಕ್ಷದ ರಾಷ್ಟ್ರೀಯ ನಾಯಕರೇ ಬರಬೇಕಾ, ಇವರಿಗೆ ಜವಾಬ್ದಾರಿ ಇಲ್ಲವಾ? ಅಡ್ರೆಸ್ ಗೆ ಇಲ್ಲದವರೂ ಯಡಿಯೂರಪ್ಪ ಅವರಿಂದಲೇ ಮೇಲೆ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ನಾನೂ ಪಕ್ಷದಲ್ಲಿ ಕಾರ್ಯಕರ್ತನಾಗಿ, ವಿವಿಧ ಹುದ್ದೆಗಳಲ್ಲಿ ೧೮ ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದೇನೆ. ನಾನೇನು ಹೊಸಬನಲ್ಲ. ಲಕ್ಷಾಂತರ ಕಾರ್ಯಕರ್ತರಿಗೆ ನಾನು ಏನು ಎಂಬುದು ಗೊತ್ತು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.