ADVERTISEMENT

ಸುಸ್ಥಿರ ಬೆಳವಣಿಗೆಗೆ ಉದ್ಯಮ ರಂಗ ಸ್ಪಂದಿಸಲಿ: ತಜ್ಞರ ಅಭಿಪ್ರಾಯ

ಜಾಗತಿಕ ಹೂಡಿಕೆದಾರರ ಸಮಾವೇಶದ ಎರಡನೇ ದಿನ ಇಂಧನ ವಲಯ, ಲಿಂಗ ಸಮಾನತೆ ಕುರಿತು ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 22:49 IST
Last Updated 3 ನವೆಂಬರ್ 2022, 22:49 IST
ಬೆಂಗಳೂರಿನಲ್ಲಿ ಗುರುವಾರ ನಡೆದ ‘ಲಿಂಗ ಸಮಾನತೆ’ ಕುರಿತ ಗೋಷ್ಠಿಯಲ್ಲಿ ಸೇಲ್ಸ್ ಫೋರ್ಸ್ ಇಂಡಿಯಾದ ಅಧ್ಯಕ್ಷೆ ಮತ್ತು ಸಿಇಒ ಅರುಂಧತಿ ಭಟ್ಟಾಚಾರ್ಯ ಮಾತನಾಡಿದರು. ಸಚಿವ ಹಾಲಪ್ಪ ಆಚಾರ್‌, ಇಂಕ್ ಸಂಸ್ಥೆಯ ಸಂಸ್ಥಾಪಕಿ ಲಕ್ಷ್ಮಿ ಪ್ರಚುರಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮತ್ತು ಗೋದ್ರೇಜ್ ಗ್ರಾಹಕರ ಉತ್ಪನ್ನಗಳ ಸಂಸ್ಥೆಯ ಮುಖ್ಯಸ್ಥೆ ನಿಸಬಾ ಗೋದ್ರೇಜ್ ಇದ್ದಾರೆ - –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ‘ಲಿಂಗ ಸಮಾನತೆ’ ಕುರಿತ ಗೋಷ್ಠಿಯಲ್ಲಿ ಸೇಲ್ಸ್ ಫೋರ್ಸ್ ಇಂಡಿಯಾದ ಅಧ್ಯಕ್ಷೆ ಮತ್ತು ಸಿಇಒ ಅರುಂಧತಿ ಭಟ್ಟಾಚಾರ್ಯ ಮಾತನಾಡಿದರು. ಸಚಿವ ಹಾಲಪ್ಪ ಆಚಾರ್‌, ಇಂಕ್ ಸಂಸ್ಥೆಯ ಸಂಸ್ಥಾಪಕಿ ಲಕ್ಷ್ಮಿ ಪ್ರಚುರಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮತ್ತು ಗೋದ್ರೇಜ್ ಗ್ರಾಹಕರ ಉತ್ಪನ್ನಗಳ ಸಂಸ್ಥೆಯ ಮುಖ್ಯಸ್ಥೆ ನಿಸಬಾ ಗೋದ್ರೇಜ್ ಇದ್ದಾರೆ - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದ ಎರಡನೇ ದಿನವಾದ ಗುರುವಾರ ಇಂಧನ ವಲಯ, ಲಿಂಗ ಸಮಾನತೆ, ಪರಿಸರ, ಸಂಚಾರ ವ್ಯವಸ್ಥೆ, ರಕ್ಷಣಾ ವಲಯ ಕುರಿತ ಗೋಷ್ಠಿಗಳಲ್ಲಿ ತಜ್ಞರು ಅಭಿಪ್ರಾಯಗಳನ್ನು ಮಂಡಿಸಿ ವಿಶ್ಲೇಷಿಸಿದರು.

ವನ್ಯಜೀವಿ ಚಲನಚಿತ್ರ ನಿರ್ಮಾಪಕ ಚದ್ದೆನ್‌ ಹಂಟರ್‌ ತಮ್ಮ ವೃತ್ತಿ ಬದುಕಿನ ರೋಚಕ ವಿಷಯಗಳನ್ನು ಹಂಚಿಕೊಂಡರು,. ‘ಹವಾಮಾನ ಬಿಕ್ಕಟ್ಟನ್ನು ತಡೆಯುವಲ್ಲಿ ಭಾರತ ಪ್ರಮುಖ ಪಾತ್ರವಹಿಸುತ್ತಿದೆ. ಸುಸ್ಥಿರ ಬೆಳವಣಿಗೆ ಮತ್ತು ಆರ್ಥಿಕ ವೃದ್ಧಿಗಾಗಿ ಭಾರತವು ಹಸಿರು ಇಂಧನಕ್ಕೆ ಹೆಚ್ಚು ಒತ್ತು ಕೊಡಬೇಕು. ಉದ್ಯಮ ವಲಯ ಈ ನಿಟ್ಟಿನಲ್ಲಿ ಸಜ್ಜಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಕೋವಿಡ್‌ ನಂತರ ಉದ್ಯಮ ವಲಯ ಮತ್ತು ಆವಿಷ್ಕಾರಗಳ ಕುರಿತು ವಿಶ್ಲೇಷಿಸಿದ ಜುಕರ್‌ಬರ್ಗ್‌ ಮಿಡಿಯಾ ಸಂಸ್ಥಾಪಕಿ ರ‍್ಯಾಂಡಿ ಜುಕರ್‌ಬರ್ಗ್‌, ‘ಉದ್ಯಮಿಯ ತಲೆ ಮತ್ತು ಕಲಾವಿದನ ಹೃದಯ ತನ್ನ ವೃತ್ತಿಜೀವನವನದ ಯಶಸ್ಸಿನ ಗುಟ್ಟು ಎಂದು ಹೇಳಿದರು.

ADVERTISEMENT

‘2010ರಲ್ಲಿ ಮೊದಲ ಬಾರಿ ಫೇಸ್‌ಬುಕ್‌ ಲೈವ್‌ ಆರಂಭಿಸಿದಾಗ ಕೇವಲ ನನ್ನ ತಂದೆ ಮತ್ತು ತಾಯಿ ವೀಕ್ಷಿಸಿದ್ದರು. ಬದಲಾಗುತ್ತಿರುವ ಜಗತ್ತಿನಲ್ಲಿ ಆವಿಷ್ಕಾರಗಳು ನಿರಂತರವಾಗಿ ನಡೆಯಬೇಕು. ಜನರ ಜತೆ ನಿರಂತರವಾಗಿ ಸಂಪರ್ಕದಲ್ಲಿರುವ ಉದ್ದೇಶದಿಂದ ಪುಸ್ತಕಗಳನ್ನು ಸಹ ನಾನು ಬರೆಯುತ್ತೇನೆ’ ಎಂದು ಹೇಳಿದರು.

ಲಿಂಗ ಸಮಾನತೆ ಕುರಿತ ಗೋಷ್ಠಿಯಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲುಗಳ ಕುರಿತು ವಿಶ್ಲೇಷಿಸಿದಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ‘ಉದ್ಯಮ ಆರಂಭಿಸಿದಾಗ ಮೊದಲು ವೈಫಲ್ಯಗಳನ್ನೇ ಎದುರಿಸಬೇಕಾಗುತ್ತದೆ. ವೈಫಲ್ಯಗಳು ಮತ್ತು ಸವಾಲುಗಳನ್ನು ಮೀರಿ ಯಶಸ್ಸು ಸಾಧಿಸುವತ್ತ ಸಾಗಬೇಕು’ ಎಂದು ಹೇಳಿದರು.

ಸೇಲ್ಸ್‌ಫೋರ್ಸ್‌ ಇಂಡಿಯಾದ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಮಾತನಾಡಿ, ‘ತಂತ್ರಜ್ಞಾನ ಬದಲಾದಂತೆ ಹಳೆಯದನ್ನು ಮರೆತು ಹೊಸತನ್ನು ಕಲಿಯಬೇಕು. ಕಲಿಕೆ ನಿರಂತರವಾದರೆ ಮಾತ್ರ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು’ ಎಂದು ಸಲಹೆ ನೀಡಿದರು.

₹1500 ಕೋಟಿ ಹೂಡಿಕೆಗೆ ಒಪ್ಪಂದ

ಎಸ್‌ಟಿಟಿ ಜಿಡಿಸಿ ಇಂಡಿಯಾ ಕಂಪನಿ ರಾಜ್ಯದಲ್ಲಿ ₹1500 ಕೋಟಿ ಹೂಡಿಕೆ ಮಾಡಲು ಕರ್ನಾಟಕ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ.

ಮುಂದಿನ 8ರಿಂದ 10 ವರ್ಷಗಳಲ್ಲಿ ಈ ಹೂಡಿಕೆಯಾಗಲಿದ್ದು, ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಲು ಈ ಕಂಪನಿ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.