ADVERTISEMENT

ಜೋಶಿಯೇ ಸಿ.ಎಂ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಲಿ: ಕುಮಾರಸ್ವಾಮಿ ಸವಾಲು

ಬಿಜೆಪಿಗೆ ಎಚ್‌.ಡಿ. ಕುಮಾರಸ್ವಾಮಿ ಸವಾಲು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 16:27 IST
Last Updated 7 ಫೆಬ್ರುವರಿ 2023, 16:27 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಮರಾಠಿ ಪೇಶ್ವೆಗಳ ವಂಶವಾಹಿ (ಡಿಎನ್‌ಎ) ಕುರಿತು ನಾನು ನೀಡಿದ್ದ ಹೇಳಿಕೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಕ್ಷಮೆಯನ್ನೂ ಕೇಳುವುದಿಲ್ಲ. ಬಿಜೆಪಿಗೆ ತಾಕತ್ತಿದ್ದರೆ ಪ್ರಲ್ಹಾದ ಜೋಶಿಯೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ, ಚುನಾವಣೆ ಎದುರಿಸಲಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಹೇಳಿಲ್ಲ. ಬ್ರಾಹ್ಮಣರು ಸೇರಿದಂತೆ ಯಾರನ್ನೂ ಅವಮಾನ ಮಾಡಿಲ್ಲ. ಶಿವಾಜಿ ಮಹಾರಾಜ, ಮಹಾತ್ಮ ಗಾಂಧಿಯನ್ನು ಕೊಂದ ವಂಶದ ಡಿಎನ್‌ಎ ಇರುವವರನ್ನು ಮುಖ್ಯಮಂತ್ರಿ ಮಾಡಲು ನಡೆಯುತ್ತಿರುವ ಪ್ರಯತ್ನದ ಬಗ್ಗೆ ನಾನು ಮಾತನಾಡಿದ್ದೇನೆ’ ಎಂದರು.

ಮರಾಠಿ ಪೇಶ್ವೆಗಳ ಮೂಲದ ವ್ಯಕ್ತಿಯನ್ನು ರಾಜ್ಯದ ಮೇಲೆ ಹೇರಲು ಬಿಜೆಪಿ ಹೊರಟಿದೆ. ಮೂರು ವರ್ಷಗಳಿಂದ ತೆರೆಮರೆಯಲ್ಲಿ ಅಂತಹ ಪ್ರಯತ್ನ ನಡೆದಿದೆ. ಚುನಾವಣೆ ಬಳಿಕ ಅದನ್ನು ನೇರವಾಗಿ ಅನುಷ್ಠಾನಕ್ಕೆ ತರುವ ಯೋಜನೆ ಇದೆ. ಆ ವ್ಯಕ್ತಿಯ ಬಗ್ಗೆ ತಕರಾರು ಇಲ್ಲ. ಅವರ ಮೂಲದ ಬಗ್ಗೆ ತಕರಾರು ಇರುವುದು ಎಂದು ಹೇಳಿದರು.

ADVERTISEMENT

‘ಬೆಳಗಾವಿಯವ ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್‌ ಭಾವಚಿತ್ರ ಹಾಕಲಾಗಿದೆ. ರಾಜ್ಯದಲ್ಲಿ ಗೋಡ್ಸೆಗೆ ಗುಡಿ ಕಟ್ಟುವ ಪ್ರಯತ್ನಗಳೂ ನಡೆದಿವೆ. ಕರ್ನಾಟಕಕ್ಕೂ ಸಾವರ್ಕರ್‌ಗೂ ಏನು ಸಂಬಂಧವಿದೆ? ಈ ರಾಜ್ಯಕ್ಕೂ ಗೋಡ್ಸೆಗೂ ಏನು ಸಂಬಂಧವಿದೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಸಾರ್ವಜನಿಕ ಆಸ್ತಿ ತಿನ್ನಲು ಕುಳಿತಿದ್ದಾರೆ’

‘ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರು ನಮ್ಮ ಕುಟುಂಬದ ಬಗ್ಗೆ ಆರೋಪ ಮಾಡಿದ್ದಾರೆ. ಇಲ್ಲಿ ನೋಡಿ ಅವರು ಏನು ಮಾಡುತ್ತಿದ್ದಾರೆ. ಸಾರ್ವಜನಿಕ ಆಸ್ತಿಯಾದ ಬಿಎಂಎಸ್‌ ಶಿಕ್ಷಣ ಟ್ರಸ್ಟ್‌ ಅನ್ನು ಖಾಸಗಿ ವ್ಯಕ್ತಿಯ ಕೈಗೆ ನೀಡಿ ಅವರ ಜತೆ ತಿನ್ನಲು ಕುಳಿತಿದ್ದಾರೆ’ ಎಂದು ಅಶ್ವತ್ಥ ನಾರಾಯಣ ಮತ್ತು ಉದ್ಯಮಿ ದಯಾನಂದ ಪೈ ಜತೆಯಾಗಿ ಊಟ ಮಾಡುತ್ತಿರುವ ಫೋಟೊವನ್ನು ಕುಮಾರಸ್ವಾಮಿ ಪ್ರದರ್ಶಿಸಿದರು.

ಶಿಕ್ಷಕ ಸತ್ತಿದ್ದೇಕೆ?

‘ಬಿಜೆಪಿ ಶಾಸಕ ಸಿ.ಟಿ. ರವಿ ಕೂಡ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅಮಾಯಕ ಕುಟುಂಬದ ಶಿಕ್ಷಕರೊಬ್ಬರು ಕೆ.ಆರ್‌.ಎಸ್‌. ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಅವರು ಏಕೆ ಸತ್ತರು? ಅದಕ್ಕೂ ಸಿ.ಟಿ. ರವಿಗೂ ಏನು ಸಂಬಂಧ? ಈ ಬಗ್ಗೆ ಅವರು ಉತ್ತರಿಸಲಿ. ಇವರೆಲ್ಲ ಸಾಚಾಗಳಾ’ ಎಂದು ಪ್ರಶ್ನಿಸಿದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.