ADVERTISEMENT

‘ಹುನಗುಂದ ಕ್ಷೇತ್ರಕ್ಕೆ ಕೂಡಲಸಂಗಮ ಹೆಸರಿಡಲಿ’

34ನೇ ಶರಣ ಮೇಳದ ನಿರ್ಣಯಗಳು

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 20:33 IST
Last Updated 15 ಜನವರಿ 2021, 20:33 IST
ಚನ್ನಬಸವಾನಂದ ಸ್ವಾಮೀಜಿ
ಚನ್ನಬಸವಾನಂದ ಸ್ವಾಮೀಜಿ   

ಕೂಡಲಸಂಗಮ: ಹುನಗುಂದ ವಿಧಾನಸಭಾ ಕ್ಷೇತ್ರಕ್ಕೆ ಕೂಡಲಸಂಗಮ ಹೆಸರಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನು ಇಲ್ಲಿನ ಬಸವ ಧರ್ಮ ಪೀಠ ಆವರಣದಲ್ಲಿ 3 ದಿನ ನಡೆದ 34ನೇ ಶರಣ ಮೇಳದಲ್ಲಿ ಕೈಗೊಳ್ಳಲಾಯಿತು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ನಿರ್ಣಯಗಳನ್ನು ಪ್ರಕಟಿಸಿದರು.

ನಿರ್ಣಯಗಳು: ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಜೈನರ ಪವಿತ್ರ ಸ್ಥಳವಾದ್ದರಿಂದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ಎಂದು ಸರ್ಕಾರ ಮಾಡಿದ್ದು, ಅದೇ ಮಾದರಿಯಲ್ಲಿ ಹುನಗುಂದ ವಿಧಾನಸಭಾ ಮತಕ್ಷೇತ್ರಕ್ಕೆ ಕೂಡಲಸಂಗಮ ವಿಧಾನಸಭಾ ಮತಕ್ಷೇತ್ರ ಎಂದು ಹೆಸರಿಡಬೇಕು.

ಕಳೆದ ಹಲವು ದಿನಗಳಿಂದ ಕೃಷಿ ಕಾಯ್ದೆ ರದ್ದತಿ ಕುರಿತು ದೇಶದಾದ್ಯಂತ ನಡೆಯುತ್ತಿರುವರೈತರ ಚಳುವಳಿಗೆ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಬಸವ ಧರ್ಮ ಪೀಠ ಬೆಂಬಲಿಸುವುದು. ರೈತರ ಬೇಡಿಕೆಗೆ ಸಕರಾತ್ಮಕವಾಗಿ ಕೇಂದ್ರ ಸರ್ಕಾರ ಸ್ಪಂದಿಸಬೇಕು.

ADVERTISEMENT

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿರುವ ಉಣಕಲ್‌ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಣ ಮಾಡಬೇಕು. ಈ ಬಗ್ಗೆ 2003 ಜನೆವರಿ 16 ರಂದು ಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್ ಆಗಿದೆ. 18 ವರ್ಷ ಕಳೆದರೂ ಇನ್ನೂ ನಾಮಕರಣ ಮಾಡಿಲ್ಲ. ಕೂಡಲೇ ನಾಮಕರಣ ಮಾಡಬೇಕು, ಇಲ್ಲದೇ ಹೋದರೆ ಹೋರಾಟ ಮಾಡಬೇಕು.

ಜೋಯಿಡಾ ತಾಲ್ಲೂಕಿನ ಅಣಸಿ ಕಾಳಿ ಹುಲಿ ರಕ್ಷಿತ ಅಭಯಾರಣ್ಯವನ್ನು ಚನ್ನಬಸವೇಶ್ವರ ರಾಷ್ಟ್ರೀಯ ಅಭಯಾರಣ್ಯ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು. ಲಿಂಗಾಯತ ಸಮುದಾಯದವರಿಗೆ ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಬದಲಿಗೆ ಕೇವಲ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ಕೊಡಬೇಕು. ಕೇಂದ್ರದ 2021ರ ಧರ್ಮವಾರು ಜನಗಣತಿ
ಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಮಾತ್ರ ಬಳಸುವಂತೆ ಜನಜಾಗೃತಿ ಯಾತ್ರೆಯನ್ನು ಐದು ರಾಜ್ಯದಲ್ಲಿ ಹಮ್ಮಿಕೊಳ್ಳುತ್ತೇವೆ.

ಬಸವಣ್ಣನ ವಿಚಾರಗಳನ್ನು ಜಗತ್ತಿಗೆ ಬಿತ್ತರಿಸುವ ಉದ್ದೇಶದಿಂದ ಹಿಂದಿನ ಸರ್ಕಾರ ಕೂಡಲಸಂಗಮ ಅಭಿವೃದ್ಧಿಗೆ ಮಂಡಳಿಗೆ ₹ 139 ಕೋಟಿ ಅನುದಾನ ನೀಡಿ ಕಾಮಗಾರಿಗೆ ಚಾಲನೆ ಕೊಟ್ಟಿದೆ. ಕೆಲಕಾಮಗಾರಿ ಇನ್ನೂ ಆರಂಭವಾಗಿಲ್ಲ. ತೀವ್ರಗತಿಯಲ್ಲಿ ಕಾಮಗಾರಿ ನಡೆಯುವಂತೆ ಸರ್ಕಾರ ಮಾಡಬೇಕು.

ದೇಶದಲ್ಲಿ ಧರ್ಮ ಮತ್ತು ಸಮಾಜ ಸುಧಾರಕರ ಐಕ್ಯ ಸ್ಥಳ ವೀಕ್ಷಣೆಗೆ ಪ್ರವೇಶ ಶುಲ್ಕ ಇಲ್ಲ. ಬಸವಣ್ಣನ ಐಕ್ಯ ಸ್ಥಳ ವೀಕ್ಷಣೆಗೆ ಮಂಡಳಿ ಪ್ರತಿಯೊಬ್ಬರಿಗೂ ₹ 5 ಪ್ರವೇಶ ಶುಲ್ಕ ಪಡೆಯುತ್ತಿದ್ದು ಇದನ್ನು ರದ್ದು ಪಡಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.