ADVERTISEMENT

ಹಂಪಿ ಉತ್ಸವಕ್ಕೆ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 19:46 IST
Last Updated 30 ನವೆಂಬರ್ 2018, 19:46 IST
ನಮ್ಮ ಕೆರೆ ನಮ್ಮ ಹಕ್ಕು ಬಳಗದ ಅಂಚೆ ಕೊಟ್ರೇಶ್ ಮುಖ್ಯಮಂತ್ರಿಗೆ ಬರೆದ ಪತ್ರ
ನಮ್ಮ ಕೆರೆ ನಮ್ಮ ಹಕ್ಕು ಬಳಗದ ಅಂಚೆ ಕೊಟ್ರೇಶ್ ಮುಖ್ಯಮಂತ್ರಿಗೆ ಬರೆದ ಪತ್ರ   

ಬಳ್ಳಾರಿ: ಹಂಪಿ ಉತ್ಸವ ರದ್ದು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲೆಯ ಕಲಾವಿದರು, ಸರಳವಾಗಿಯಾದರೂ ಉತ್ಸವ ನಡೆಯಲೇಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಧರಣಿ ನಡೆಸಿದ ಕಲಾವಿದರು, ಉತ್ಸವಕ್ಕಾಗಿನ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ಅವರಿಗೆ ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ ಬರಗಾಲವಿದ್ದಾಗಲೇ ಮೈಸೂರು ದಸರಾ ಉತ್ಸವವನ್ನು ಸರ್ಕಾರ ನಡೆಸಿದೆ. ಆದರೆ, ಬರಗಾಲದ ನೆಪವೊಡ್ಡಿ ಹಂಪಿ ಉತ್ಸವ ವನ್ನು ರದ್ದು ಮಾಡಿರುವುದು ಸರಿಯಲ್ಲ’ ಎಂದು ತೊಗಲುಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ಪ್ರತಿಪಾದಿಸಿದರು

ADVERTISEMENT

ಹಂಪಿ ಉತ್ಸವವನ್ನು ಆಚರಿ ಸಲೇಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ, ಕೊಟ್ಟೂರಿನ ‘ನಮ್ಮ ಕೆರೆ ನಮ್ಮ ಹಕ್ಕು’ ಬಳಗದ ಕೊಟ್ರೇಶ್‌ ಅವರು ಶುಕ್ರವಾರದಿಂದ ಪತ್ರ ಚಳವಳಿಯನ್ನು ಆರಂಭಿಸಿದ್ದಾರೆ.

‘ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿ ಮಳೆ ಇಲ್ಲದೇ ಬರಗಾಲ ಬಂದಿದೆ ನಿಜ. ಹಾಗೆಂದು ಯಾರೂ ಉಪವಾಸವಿಲ್ಲ, ಹಬ್ಬಗಳನ್ನು ಆಚರಿಸುತ್ತಾರೆ, ನಾಟಕ ಸಿನಿಮಾ ನೋಡುತ್ತಾರೆ. ಮೈಸೂರು ದಸರಾದ ಹುಟ್ಟಿಗೆ ಕಾರಣ ಹಂಪಿಯ ವಿಜಯನಗರ ಸಾಮ್ರಾಜ್ಯದ ರಾಜರು. ಆದರೆ, ಹಂಪಿ ಉತ್ಸವಕ್ಕೇ ಅಡ್ಡಿ ಆತಂಕಗಳು ಬರುತ್ತಿದ್ದು, ಇದುವರೆಗೂ 12 ಬಾರಿ ರದ್ದಾಗಿದೆ’ ಎಂದು ವಿಷಾದಿಸಿದ್ದಾರೆ.

‘ವಿದೇಶಗಳ ಕಲಾವಿದರನ್ನು ಕರೆಸಿ ಕೋಟಿಗಟ್ಟಲೇ ಹಣ ಖರ್ಚು ಮಾಡುವುದು ಬೇಡ. ಸ್ಥಳೀಯ ಕಲಾವಿದರನ್ನು ಕರೆಸಿ ಕೆಲವೇ ಸಾವಿರ ರೂಪಾಯಿಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.