ADVERTISEMENT

ಕೋವಿಡ್‌ಗೆ ಔಷಧ | ‘ಐವರ್ಮೆಕ್ಟಿನ್‌’ ಬಳಕೆ: ಕೇಂದ್ರಕ್ಕೆ ಪತ್ರ

ಕೋವಿಡ್‌ ಆರಂಭಿಕ ಹಂತದಲ್ಲಿ ಅತ್ಯಂತ ಪರಿಣಾಮಕಾರಿ, ಸುರಕ್ಷಿತ ಔಷಧ: ಆರೋಗ್ಯ ಸಚಿವರಿಗೆ ಪತ್ರ ಬರೆದ ಕೊಡಗಿನ ವೈದ್ಯೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 14:16 IST
Last Updated 1 ಜೂನ್ 2021, 14:16 IST
ಡಾ.ಕಾವೇರಿ
ಡಾ.ಕಾವೇರಿ   

ಮಡಿಕೇರಿ: ಆರಂಭಿಕ ಹಂತದಲ್ಲಿ ಕೋವಿಡ್‌–19ಗೆ ಐವರ್ಮೆಕ್ಟಿನ್ (Ivermectin - MERCK Company) ಔಷಧವು ಪರಿಣಾಮಕಾರಿ ಎನಿಸಿದ್ದು ಅದನ್ನು ಹೆಚ್ಚು ಬಳಕೆಗೆ ವೈದ್ಯರು ಹಾಗೂ ಶುಶ್ರೂಷಕಿಯರಲ್ಲಿ ಅರಿವು ಹಾಗೂ ಸಲಹೆ ನೀಡುವಂತೆ ಕೋರಿ ಕೊಡಗು ಜಿಲ್ಲೆ ಪೊನ್ನಂಪೇಟೆಯ ವೈದ್ಯೆ ಡಾ.ಕಾವೇರಿ ನಂಬಿಸನ್ ಅವರು, ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ದನ್‌ಗೆ ಪತ್ರ ಬರೆದಿದ್ದಾರೆ.

‘ಪೊನ್ನಂಪೇಟೆಯಂಥ ಗ್ರಾಮೀಣ ಪ್ರದೇಶದಲ್ಲಿ, ನಾನು ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದೇನೆ. ಕೊರೊನಾ ಸೋಂಕು ತಗುಲಿದ ರೋಗಿಗಳಿಗೆ, ಆರಂಭಿಕ ಹಂತದಲ್ಲಿಯೇ ಈ ಔಷಧಿ ನೀಡಿದಾಗ ಉತ್ತಮ ಫಲಿತಾಂಶವೂ ಲಭಿಸಿದೆ. ರೋಗಿಗಳೂ ಗುಣವಾಗುತ್ತಿದ್ದಾರೆ. ಇದು ಸುರಕ್ಷಿತ. ದುಬಾರಿಯೂ ಅಲ್ಲ. ಗೋವಾ, ಒಡಿಶಾ ಹಾಗೂ ಮಧ್ಯ ಪ್ರದೇಶದಲ್ಲೂ ಈ ಔಷಧವನ್ನು ಕೋವಿಡ್‌ ತಡೆಗೆ ಆರಂಭಿಕ ಹಂತದಲ್ಲಿ ವೈದ್ಯರು ಬಳಕೆ ಮಾಡುತ್ತಿದ್ದಾರೆ. ಉಳಿದ ಭಾಗದಲ್ಲೂ ವೈದ್ಯರು ಈ ಔಷಧಿ ಬಳಸಬಹುದಾಗಿದೆ’ ಎಂದು ಹೇಳಿದ್ದಾರೆ.

‘ಈ ಔಷಧಿ ಬಳಕೆ ಮಾಡಬಹುದೆಂದು ಐಸಿಎಂಆರ್‌ ತಿಳಿಸಿದೆ. ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್‌ನವರೂ ಮಾರ್ಗಸೂಚಿಯಲ್ಲಿ ಔಷಧಿ ಬಳಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.ಡಿ ವರ್ಮಿಂಗ್ ಟ್ಯಾಬ್ಲೆಟ್ ಆಗಿ ಕೆಲವು ವರ್ಷಗಳಿಂದ ದೇಶದಲ್ಲಿ ಐವರ್ಮೆಕ್ಟಿನ್ ಔಷಧ ಹೆಚ್ಚಾಗಿ ಬಳಸಲಾಗಿತ್ತು. ಈಗ ಕೋವಿಡ್‌ ತಡೆಗೆ ಪರಿಣಾಮಕಾರಿ ಎನಿಸಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಸೋಂಕು ತಗುಲಿದ ಆರಂಭಿಕ ಹಂತದಲ್ಲಿಯೇ ಈ ಔಷಧಿ ನೀಡಿದರೆ, ವೈರಾಣು ದ್ವಿಗುಣಗೊಳ್ಳುವುದಿಲ್ಲ. ರೋಗಿ ಗಂಭೀರ ಸ್ಥಿತಿಗೂ ತಲುಪುವುದಿಲ್ಲ. ರೋಗ ಲಕ್ಷಣ ಕಂಡುಬಂದ ವ್ಯಕ್ತಿಗೆ ಕೋವಿಡ್‌ ಪರೀಕ್ಷಾ ವರದಿ ಬರುವುದಕ್ಕೂ ಮೊದಲೇ ಈ ಮಾತ್ರೆ ನೀಡಬಹುದು. ಏಕೆಂದರೆ, ಇದು ಅತ್ಯಂತ ಸುರಕ್ಷಿತ. ಶೇ 74ರಷ್ಟು ಪರಿಣಾಮಕಾರಿಯೆಂದು ಸಾಬೀತಾಗಿದೆ’ ಎಂದು ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಮೂಲದ ವೈದ್ಯ ಡಾ.ಶಂಕರ ಚೆಟ್ಟಿ, ಐವರ್ಮೆಕ್ಟಿನ್ ಔಷಧದೊಂದಿಗೆ ಸುಮಾರು 4,000 ಕೋವಿಡ್ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಲಸಿಕೆ ನಿರೀಕ್ಷಿತ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಸಾಕಷ್ಟು ವಲಯದ ಜನರು ಅಸುರಕ್ಷಿತ ವಲಯದಲ್ಲಿದ್ದಾರೆ. ಮಾರ್ಗಸೂಚಿಯಲ್ಲಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ‘ಐವರ್ಮೆಕ್ಟಿನ್’ ಬಳಕೆ ಮಾಡುತ್ತಿಲ್ಲ. ಇದರ ಬಳಕೆಯ ಆಶಾ ಕಾರ್ಯಕರ್ತರಿಗೂ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ಪ್ರತಿಕ್ರಿಯೆ ಬಂದಿಲ್ಲ’ ಎಂದು ಹೇಳಿದ್ದಾರೆ.

‘ಕೋವಿಡ್ ತರಹದ ರೋಗಲಕ್ಷಣಗಳು ಕಂಡುಬಂದ ವ್ಯಕ್ತಿಗೆ ಆರಂಭದ 7 ದಿನಗಳ ತನಕ ಪ್ರತಿದಿನ ನೀಡಬೇಕು. ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಐವರ್ಮೆಕ್ಟಿನ್ ಪ್ರಬಲ ರೋಗನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಮುಂಚೂಣಿ ಕಾರ್ಯಕರ್ತರಿಗೂ ಇದನ್ನು ನೀಡುವ ವ್ಯವಸ್ಥೆ ಆಗಬೇಕು’ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.