ADVERTISEMENT

ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಮತ್ತೆ ಪ್ರಧಾನಿಗೆ ಪತ್ರ: ರುಪ್ಸ ತೀರ್ಮಾನ

ರುಪ್ಸ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 22:18 IST
Last Updated 25 ಜನವರಿ 2023, 22:18 IST
   

ಬೆಂಗಳೂರು: ಆರ್‌ಟಿಇ ಶುಲ್ಕ ಮರುಪಾವತಿ, ಶಾಲೆಗಳ ಮಾನ್ಯತೆ ನವೀಕರಣ ಮತ್ತಿತರ ಪ್ರಕರಣಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗೆ ಮತ್ತೊಮ್ಮೆ ಪತ್ರ ಬರೆಯಲು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸ) ನಿರ್ಣಯ ತೆಗೆದುಕೊಂಡಿದೆ.

ಶಾಸಕರ ಭವನದಲ್ಲಿ ಬುಧವಾರ ನಡೆದ ಸಂಘದ ಕಾರ್ಯಕಾರಿ ಮಂಡಳಿಯ ಸಭೆಯ ಬಳಿಕ ಈ ವಿಷಯ ತಿಳಿಸಿದ ರುಪ್ಸ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ‘ಶಿಕ್ಷಣ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ ಕುರಿತು ಮೂರು ವರ್ಷಗಳಿಂದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಗಮನ ಸೆಳೆದಿದ್ದೇವೆ. ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕೆಲವು ಸಾಕ್ಷ್ಯಗಳನ್ನು ಸಲ್ಲಿಸಿದರೂ, ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ, ಹಲವು ಸುತ್ತೋಲೆ ಹೊರಡಿಸುವ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳಲ್ಲೇ ಗೊಂದಲ ಸೃಷ್ಟಿಸಲಾಗಿದೆ. ಭ್ರಷ್ಟಾಚಾರಿಗಳಿಗೆ ಹಣ ಮಾಡಲು ಅನುಕೂಲ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದರು.

‘10 ವರ್ಷಗಳಿಗೆ ಒಮ್ಮೆ ಮಾನ್ಯತೆ ನವೀಕರಣ ಮಾಡಬೇಕೆಂದು ಇಲಾ ಖೆಯ ನಿಯಮ ಇದ್ದರೂ, ಅದನ್ನು ಐದು ಅಥವಾ ಪ್ರತಿವರ್ಷ ಎಂದು ಬದಲಾಯಿಸಲಾಗಿದೆ. ಶಾಲೆಗಳ ಆಡಳಿತ ಮಂಡಳಿ ಕೊಡುವ ಲಂಚದ ಗಾತ್ರದ ಮೇಲೆ ನವೀಕರಣದ ವರ್ಷಗಳು ನಿರ್ಧಾರವಾಗುತ್ತಿವೆ. ಆರ್‌ಟಿಇ ಶುಲ್ಕದ ಮರುಪಾವತಿಗೂ ಲಂಚ ನೀಡಬೇಕಿದೆ. ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳು ನಿರಕ್ಷೇಪಾಣಾ ಪತ್ರ (ಎನ್‌ಒಸಿ) ಪಡೆಯಲು ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ದೊಡ್ಡ ತಂಡವನ್ನೇ ನಿರ್ವಹಣೆ ಮಾಡಬೇಕಿದೆ. ಭ್ರಷ್ಟಾಚಾರದ ಕುರಿತು ದೂರು ಸಲ್ಲಿಸಿದ ನಂತರ 700 ಶಾಲೆಗಳಿಗೆ ಎನ್‌ಒಸಿ ನೀಡಿದ್ದ ದಾಖಲೆಗಳೇ ಮಾಯ ಆಗಿವೆ’ ಎಂದು ಆರೋಪ ಮಾಡಿದರು.

ADVERTISEMENT

‘‌ಶಾಲೆ ನವೀಕರಣಕ್ಕೆ ಬಿಇಒದಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಲಂಚ ಕೊಡಲೇಬೇಕು. ಹೀಗಾದರೆ, ಬಜೆಟ್ ಖಾಸಗಿ ಶಾಲೆ ಉಳಿಯುವುದು ಹೇಗೆ? ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೆ, ಅಂಥ ಶಾಲೆಗಳ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ. ಅಧಿಕಾರಿಗಳಿಗೆ ಶಿಕ್ಷಣ ಸಚಿವರ ಸಹಕಾರವಿದೆ. ಬಿಇಒ, ಡಿಡಿಪಿಐ ಮತ್ತಿತರ ಅಧಿಕಾರಿಗಳ ವರ್ಗಾವಣೆಯಲ್ಲೂ ಹಣದ ವ್ಯವಹಾರ ನಡೆಯುತ್ತದೆ. ಈ ಎಲ್ಲ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಮತ್ತೊಮ್ಮೆ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಪತ್ರ ಬರೆಯಲು ನಿರ್ಣಯಿಸಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.