ADVERTISEMENT

ಸೈಯದ್ ಗ್ರಂಥಾಲಯಕ್ಕೆ ಪ್ರಕಾಶಕರ ಸಂಘದ ನೆರವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 16:32 IST
Last Updated 12 ಏಪ್ರಿಲ್ 2021, 16:32 IST

ಬೆಂಗಳೂರು: ಮೈಸೂರಿನ ಸೈಯದ್ ಐಸಾಕ್ ಅವರಿಗೆಗ್ರಂಥಾಲಯವನ್ನು ಪುನರ್ ಸ್ಥಾಪಿಸಲು 5 ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕರ್ನಾಟಕ ಪ್ರಕಾಶಕರ ಸಂಘ ಘೋಷಿಸಿದೆ.

ಕಳೆದ ಶುಕ್ರವಾರ ನಸುಕಿನಲ್ಲಿ ಕಿಡಿಗೇಡಿಗಳು ಅವರ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ್ದರು. ಸುಮಾರು 11 ಸಾವಿರ ಪುಸ್ತಕಗಳು ಭಸ್ಮವಾಗಿದ್ದವು. ಈ ಘಟನೆಗೆ ರಾಜ್ಯದಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಅದೇ ಸ್ಥಳದಲ್ಲಿ ಗ್ರಂಥಾಲಯ ಮರು ನಿರ್ಮಾಣಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಅವರಿಗೆ ನೆರವಿನ ಭರವಸೆಯ ಮಹಾಪೂರ ಹರಿದುಬಂದಿದ್ದವು. ಈಗ ಪ್ರಕಾಶಕರ ಸಂಘ ಸಹ ಘಟನೆಯನ್ನು ಖಂಡಿಸಿ, ನೆರವು ನೀಡಲು ಮುಂದೆ ಬಂದಿದೆ.

ಗ್ರಂಥಾಲಯಕ್ಕೆ ಬೆಂಕಿ ಇಟ್ಟ ದುಷ್ಕೃತ್ಯ ಖಂಡನೀಯ. ಅದೇ ಸ್ಥಳದಲ್ಲಿ ಗ್ರಂಥಾಲಯ ಪುನರ್ ಸ್ಥಾಪನೆಯಾಗಬೇಕು. ಸಂಘದ ವತಿಯಿಂದ 5 ಸಾವಿರ ಪುಸ್ತಕಗಳನ್ನು ನೀಡಲು ತೀರ್ಮಾನಿಸಲಾಗಿದೆ. ನವಕರ್ನಾಟಕ ಪಬ್ಲಿಕೇಷನ್ಸ್, ಅಂಕಿತ ಪುಸ್ತಕ, ಛಂದ ಪುಸ್ತಕ, ಸೃಷ್ಠಿ ಪಬ್ಲಿಕೇಷನ್ಸ್, ಚಾರುಮತಿ ಪ್ರಕಾಶನ, ಅಭಿನವ, ಸಿರಿವರ ಪ್ರಕಾಶನ, ವಿಕಾಸ ಪ್ರಕಾಶನ, ಭೂಮಿ ಬುಕ್ಸ್ ಸೇರಿದಂತೆ ವಿವಿಧ ಪ್ರಕಾಶನ ಸಂಸ್ಥೆಗಳು ಪುಸ್ತಕಗಳನ್ನು ಕೊಡಲು ಮುಂದೆ ಬಂದಿವೆ. ಇದೇ 23ರಂದು ವಿಶ್ವ ಪುಸ್ತಕ ದಿನದ ಪ್ರಯುಕ್ತ ಸಾಂಕೇತಿಕವಾಗಿ ಪುಸ್ತಕಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ತಿಳಿಸಿದ್ದಾರೆ. ‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.