ADVERTISEMENT

ಭಗವಾನ್‌ ಕೃತಿ ಕೈಬಿಟ್ಟ ಪುಸ್ತಕ ಆಯ್ಕೆ ಸಮಿತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 17:36 IST
Last Updated 19 ಜನವರಿ 2021, 17:36 IST

ಬೆಂಗಳೂರು: ಕೆ.ಎಸ್. ಭಗವಾನ್ ಅವರ ‘ರಾಮ ಮಂದಿರ ಏಕೆ ಬೇಡ?’ ಕೃತಿಯ ಆಯ್ಕೆಗೆ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗಿದ್ದರಿಂದಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯು 2018ನೇ ಸಾಲಿನ ಆಯ್ಕೆ ಪಟ್ಟಿಯಿಂದ ಕೃತಿಯನ್ನು ಕೈಬಿಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ತಿಳಿಸಿದ್ದಾರೆ.

‘2018ರಲ್ಲಿ ಗ್ರಂಥಾಲಯ ಇಲಾಖೆಗೆ 10,571 ಕೃತಿಗಳು ಸ್ವೀಕೃತವಾಗಿದ್ದವು. ಆಯ್ಕೆ ಸಮಿತಿಯ ಸದಸ್ಯರು ಈ ಪುಸ್ತಕಗಳನ್ನು ಪರಿಶೀಲಿಸಿ, 5,109 ಪುಸ್ತಕಗಳನ್ನು ಆಯ್ಕೆ ಮಾಡಿದ್ದರು. ಹಿಂದಿನ ಸಭೆಗಳಲ್ಲಿ ವಿವಾದಾಸ್ಪದ ಕೃತಿ ಎಂದು ತಿರಸ್ಕರಿಸಲಾಗಿದ್ದ ಲಡಾಯಿ ಪ್ರಕಾಶನ ಪ್ರಕಟಿಸಿರುವ ‘ರಾಮ ಮಂದಿರ ಏಕೆ ಬೇಡ?’ ಎಂಬ ಕೃತಿ ಮರುಪರಿಶೀಲನೆಗೆ ಸ್ವೀಕೃತವಾಗಿತ್ತು. ಇದು ಬಹುಸಂಖ್ಯಾತ ಭಾರತೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಬಗ್ಗೆ ಚರ್ಚೆ ನಡೆಯಿತು ’ ಎಂದು ಅವರು ತಿಳಿಸಿದ್ದಾರೆ.

‘ಈ ಪುಸ್ತಕವು 2018ನೇ ಸಾಲಿನ ಆಯ್ಕೆ ಪಟ್ಟಿಯಲ್ಲಿ 4,062ನೇ ಸಂಖ್ಯೆಯಲ್ಲಿದ್ದು, ಆ ಸಾಲಿನ 5,109 ಪುಸ್ತಕಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲು ಶಿಫಾರಸು ಮಾಡಲಾಗಿತ್ತು. ಈ ಪುಸ್ತಕಗಳ ಪಟ್ಟಿಯಲ್ಲಿ ಮೊದಲ 350 ಪುಸ್ತಕಗಳನ್ನು ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದ ಅನುದಾನದಲ್ಲಿ ತಲಾ 300 ಪ್ರತಿಗಳನ್ನು ಖರೀದಿಸಲು ಗ್ರಂಥಾಲಯ ಇಲಾಖೆ ಕ್ರಮಕೈಗೊಂಡಿದೆ. ಉಳಿದ ಪುಸ್ತಕಗಳ ಖರೀದಿಗೆ ಅನುದಾನ ಬಿಡುಗಡೆಯಾಗಲಿಲ್ಲ. ಆದ್ದರಿಂದ 4,062ನೇ ಸಂಖ್ಯೆಯಲ್ಲಿರುವ ಪುಸ್ತಕವನ್ನು ಖರೀದಿಸುವ ಪ್ರಮೇಯವೇ ಉದ್ಭವವಾಗಿರುವುದಿಲ್ಲ’ ಎಂದು ವಿವರಿಸಿದ್ದಾರೆ.

ADVERTISEMENT

‘ಈ ಕೃತಿಗೆ ಸಾರ್ವಜನಿಕ ಆಕ್ಷೇಪಗಳು ವ್ಯಕ್ತವಾದ ಕಾರಣ ಸಮಿತಿಯು ಈ ಬಗ್ಗೆ ಕೂಲಂಕಶ ಚರ್ಚೆ ನಡೆಸಿ, ಕೃತಿಯನ್ನು ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಿದೆ. ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಿ, ಈ ಶೀರ್ಷಿಕೆಯ ಪುಸ್ತಕವನ್ನು ಸಮಿತಿಯು ಹಿಂಪಡೆದಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.