ADVERTISEMENT

'ಭಾಗ್ಯ ಲಕ್ಷ್ಮಿ' ಯೋಜನೆ ಎಲ್ಐಸಿ ಮೂಲಕವೇ ಜಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 13:11 IST
Last Updated 22 ಡಿಸೆಂಬರ್ 2020, 13:11 IST
   

ಬೆಂಗಳೂರು: 'ಭಾಗ್ಯ ಲಕ್ಷ್ಮಿ' ಯೋಜನೆಯಡಿ ನೀಡಬಹುದಾದ ಅತ್ಯುತ್ತಮ ಕೊಡುಗೆಯ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸುವಂತೆ ಭಾರತೀಯ ಜೀವ ವಿಮಾ ಕಂಪನಿಯ (ಎಲ್ಐಸಿ) ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

'ಭಾಗ್ಯ ಲಕ್ಷ್ಮಿ' ಯೋಜನೆಯಡಿ ರಾಜ್ಯ ಸರ್ಕಾರ ಪಾವತಿಸುತ್ತಿರುವ ಪ್ರಿಮಿಯಂ ಮೊತ್ತಕ್ಕೆ 1 ವರ್ಷದ ವೇಳೆಗೆ 1 ಲಕ್ಷ ರೂಪಾಯಿ ನೀಡಲು ಎಲ್ಐಸಿಯು ಅಸಹಾಯಕತೆ ವ್ಯಕ್ತಪಡಿಸಿತ್ತು. ಹೀಗಾಗಿ, ಈ ಯೋಜನೆಯನ್ನುಭಾರತೀಯ ಅಂಚೆಯ ಸುಕನ್ಯಾ ಸಮೃದ್ಧಿ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಮುಖ್ಯಮಂತ್ರಿ ಅವರನ್ನು ಮಂಗಳವಾರ ಭೇಟಿ ಮಾಡಿದ ಎಲ್ಐಸಿ ವಲಯ ವ್ಯವಸ್ಥಾಪಕಿ ಮಿನಿ ಇಪೆ ನೇತೃತ್ವದ ಅಧಿಕಾರಿಗಳ ನಿಯೋಗ, 'ಭಾಗ್ಯ ಲಕ್ಷ್ಮಿ' ಯೋಜನೆಯನ್ನು ಎಲ್ಐಸಿ ಮೂಲಕವೇ ಜಾರಿಗೊಳಿಸುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿತು.

ADVERTISEMENT

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, "ಭಾಗ್ಯ ಲಕ್ಷ್ಮಿ ಯೋಜನೆಯಡಿ ನೀವು ನೀಡಬಹುದಾದ ಕೊಡುಗೆಗಳ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಪರಿಶೀಲಿಸಲಾಗುವುದು' ಎಂದರು.

ಎಲ್ಐಸಿ ಅಧಿಕಾರಿಗಳ ನಿಯೋಗದ ಭೇಟಿ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ನಾಗಲಾಂಬಿಕಾ ದೇವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.