ADVERTISEMENT

ಕತ್ತಲೆಯಲ್ಲಿ ಕೊಡಗಿನ ‘ದೇವರಪುರ’ ಜನರ ಜೀವನ

ಕನಿಷ್ಠ ಸೌಲಭ್ಯವೂ ಇಲ್ಲದೆ ಬದುಕು ಸಾಗಿಸುತ್ತಿರುವ ಜನರು

ಅದಿತ್ಯ ಕೆ.ಎ.
Published 13 ಜೂನ್ 2020, 8:23 IST
Last Updated 13 ಜೂನ್ 2020, 8:23 IST
ಕೊಡಗಿನ ದೇವರಪುರ ಹಾಡಿಗೆ ತೆರಳುವ ರಸ್ತೆಯ ದುಃಸ್ಥಿತಿ – ಪ್ರಜಾವಾಣಿ ಚಿತ್ರಗಳು 
ಕೊಡಗಿನ ದೇವರಪುರ ಹಾಡಿಗೆ ತೆರಳುವ ರಸ್ತೆಯ ದುಃಸ್ಥಿತಿ – ಪ್ರಜಾವಾಣಿ ಚಿತ್ರಗಳು    

ಮಡಿಕೇರಿ: ಕೊಡಗಿನ ಈ ಗ್ರಾಮದ ಹೆಸರು ‘ದೇವರಪುರ’. ಹೆಸರಷ್ಟೇ ದೇವರಿಗೆ ಪ್ರೀತಿ. ಲಾಕ್‌ಡೌನ್‌ ಅವಧಿಯಲ್ಲಿ ದೊಡ್ಡ ನಗರಗಳ ಜನರು, ಕೆಲವು ದಿನ ಆಧುನಿಕ ಸೌಲಭ್ಯ ಸಿಗದಿರುವುದಕ್ಕೆ ಕಂಗೆಟ್ಟು ಹೋಗಿದ್ದರು. ಆದರೆ, ದೇವರಪುರ ಹಾಡಿ ನಿವಾಸಿಗಳಿಗೆ ಹತ್ತಾರು ವರ್ಷದಿಂದ ಕನಿಷ್ಠ ಮೂಲ ಸೌಲಭ್ಯಗಳೇ ಸಿಕ್ಕಿಲ್ಲ. ‘ಇಲ್ಲ’ಗಳ ನಡುವೆ ಇವರ ಬದುಕು.

ಈ ಹಾಡಿ ವಿರಾಜಪೇಟೆ– ಕಣ್ಣೂರು ಅಂತರ ರಾಜ್ಯ ಹೆದ್ದಾರಿಯ ಗೋಣಿಕೊಪ್ಪಲು, ತಿತಿಮತಿ ನಡುವೆಯಿದೆ. ಸುಮಾರು 180 ಜೇನು ಕುರುಬ ಹಾಗೂ ಯರವ ಕುಟುಂಬಗಳು ಹಲವು ವರ್ಷದಿಂದ ನೆಲೆಸಿವೆ. ಕೊಡಗಿನ ಕೆಲವು ಹಾಡಿಗಳಿಗೆ ಒಂದಷ್ಟು ಸೌಲಭ್ಯ ಸಿಕ್ಕಿದ್ದರೂ, ದೇವರಪುರ ಜನರದ್ದು ಮಾತ್ರ ದುಃಸ್ಥಿತಿಯ ಬದುಕು.

1970–80ರ ನಡುವೆ ಇಲ್ಲಿಗೆ ಬಂದಿದ್ದ ಜನರಿಗೆ 1988ರಲ್ಲಿ ಸರ್ಕಾರವೇ ಜನತಾ ಮನೆ ನಿರ್ಮಿಸಿಕೊಟ್ಟಿತ್ತು. ಕೆಲವು ಮನೆಗಳು ಕುಸಿದಿದ್ದು ಅದೇ ಸ್ಥಳದಲ್ಲಿ ಟಾರ್ಪಲ್‌ ಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ. ಕೆಲವರಿಗೆ ಹಕ್ಕುಪತ್ರವಿದೆ. ಜಾಗ ವಿವಾದದ ಕಾರಣಕ್ಕೆ ಮನೆಯ ದುರಸ್ತಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ADVERTISEMENT

2007ರಲ್ಲಿ ದೇವಸ್ಥಾನ ಸಮಿತಿಯವರು ಈ ಜಾಗವು ದೇವರಕಾಡಿಗೆ ಸೇರಿದ್ದು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದು, ಸೌಲಭ್ಯ ಮರೀಚಿಕೆಯಾಗಿದೆ. 13 ವರ್ಷದಿಂದ ಮಕ್ಕಳು, ವೃದ್ಧರು, ಮಹಿಳೆಯರು ನರಕದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

10 ಮನೆ ಬಿಟ್ಟರೆ ಯಾರಿಗೂ ವಿದ್ಯುತ್‌ ಸೌಲಭ್ಯವಿಲ್ಲ. ಮನೆಯ ಎದುರೇ ವಿದ್ಯುತ್‌ ಮಾರ್ಗ ಹಾದು ಹೋಗಿದ್ದರೂ ಮನೆಯಲ್ಲಿ ರಾತ್ರಿ ಬೆಳಕು ಮೂಡುತ್ತಿಲ್ಲ. ಶೌಚಾಲಯ, ರಸ್ತೆ, ಬಸ್‌ ಸೌಕರ್ಯ, ಅಂಗಡಿ... ಭಾಗ್ಯವೇ ಇಲ್ಲ. ವಯಸ್ಕರು ಆಸ್ಪತ್ರೆಗೆ ತೆರಳಲು 3 ಕಿ.ಮೀ ಸಾಗಿ ವಾಹವನ್ನೇರಿ ಗೋಣಿಕೊಪ್ಪಲು ತಲುಪಬೇಕು. ಇನ್ನು ಖಾಸಗಿ ವಾಹನಕ್ಕೆ ದುಬಾರಿ ಹಣ ನೀಡಬೇಕು ಎಂದು ನಿವಾಸಿ ಪ್ರೇಮಾ ಕಣ್ಣೀರಾದರು.

ರಾತ್ರಿ ವೇಳೆ ಭಯ...:

‘ಅಂಗನವಾಡಿ ಮಾತ್ರವಿದೆ. ಮಕ್ಕಳು, ಹೆದ್ದಾರೆ ವರೆಗೆ ನಡೆದು ಶಾಲೆಗೆ ಹೋಗುತ್ತಿದ್ದರು. ಕತ್ತಲು ಆವರಿಸಿದರೆ, ಸೀಮೆಎಣ್ಣೆ ದೀಪ ಆಸರೆ. ಕೊಳ್ಳಿ ಬೆಳಕಿನಲ್ಲಿ ಮಕ್ಕಳು ಓದು, ಬರಹ ಮಾಡಬೇಕಿದೆ. ಮಹಿಳೆಯರು, ಪುಟ್ಟ ಮಕ್ಕಳು ರಾತ್ರಿಯಾದರೆ ನಿತ್ಯಕರ್ಮಕ್ಕೆಂದು ಕಾಡಿಗೆ ಹೋದರೆ ಅಲ್ಲಿ ಕಾಡಾನೆ ಭಯ. ಪಂಚಾಯಿತಿಯಿಂದಲೂ ಶೌಚಾಲಯ ಕಟ್ಟಿಸಿಕೊಟ್ಟಿಲ್ಲ; ನಾವು ಕಟ್ಟಿಕೊಳ್ಳಲು ಬಿಟ್ಟಿಲ್ಲ. ಎಲ್ಲದಕ್ಕೂ ಸ್ಟೇಯಿದೆ ಎಂಬುದು ಉತ್ತರವಾಗಿದೆ’ ಎಂದು ಪಾರ್ವತಿ ನೋವು ತೋಡಿಕೊಂಡರು.

ಸ್ಥಳೀಯ ಆಡಳಿತ ಕೈಚೆಲ್ಲಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರೂ ಪ್ರಯೋಜನ ಆಗಿಲ್ಲ. ಬೇಸಿಗೆಯಲ್ಲಿ ನೀರಿಗೂ ಸಮಸ್ಯೆಯಿದೆ.
– ಪ್ರೇಮಾ, ಅಧ್ಯಕ್ಷೆ, ಬುಡಕಟ್ಟು ಮಹಿಳಾ ಸಂಘಟನೆ

ಸೌಲಭ್ಯ ಕಲ್ಪಿಸಿ ಎಂದರೂ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಆರ್‌ಟಿಸಿಯಲ್ಲಿ ಸರ್ಕಾರದ ಜಾಗವೆಂದು ನಮೂದಾಗಿದೆ. ಕೋರ್ಟ್‌ನಲ್ಲಿ ನ್ಯಾಯ ಸಿಗುವ ನಂಬಿಕೆಯಿದೆ.
– ಸುಬ್ರಮಣಿ, ಮಾಜಿ ಸದಸ್ಯ, ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.