ADVERTISEMENT

ಪಂಚಮಸಾಲಿಗೆ 2 ಎ ಮೀಸಲಾತಿ: ಹಿಂದುಳಿದ ವರ್ಗಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 19:32 IST
Last Updated 6 ಜನವರಿ 2022, 19:32 IST
ವೇದಿಕೆಯಿಂದ ನೀಡಿದ ಮನವಿ ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ನೆ.ಲ.ನರೇಂದ್ರಬಾಬು, ವಿಧಾನ ಪರಿಷತ್ತಿನ ಸದಸ್ಯ ಪಿ.ಅರ್. ರಮೇಶ್, ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಎಂ. ನಾಗರಾಜು ಇದ್ದರು –ಪ್ರಜಾವಾಣಿ ಚಿತ್ರ
ವೇದಿಕೆಯಿಂದ ನೀಡಿದ ಮನವಿ ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ನೆ.ಲ.ನರೇಂದ್ರಬಾಬು, ವಿಧಾನ ಪರಿಷತ್ತಿನ ಸದಸ್ಯ ಪಿ.ಅರ್. ರಮೇಶ್, ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಎಂ. ನಾಗರಾಜು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಪಟ್ಟಿಗೆ ಸೇರ್ಪಡೆ ಮಾಡಿದರೆ ಅತಿ ಹಿಂದುಳಿದ ಸಮುದಾಯದವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಚ್ಚರಿಸಿದೆ.

ನಗರದಲ್ಲಿ ಗುರುವಾರ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ಅವರಿಗೆ ಮನವಿ ಸಲ್ಲಿಸಿದ ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್‌, ‘ಯಾವುದೇ ಕಾರಣಕ್ಕೂ ಪಂಚಮಸಾಲಿ ಸಮುದಾಯಕ್ಕೆ 2–ಎ ಮೀಸಲಾತಿ ಕಲ್ಪಿಸಬಾರದು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ, ಬಲಾಡ್ಯ ಸಮುದಾಯದ ಒತ್ತಡಕ್ಕೆ ಮಣಿದರೆ ದೊಡ್ಡಮಟ್ಟದ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಕಾನೂನು ಸಮರಕ್ಕೂ ಹಿಂಜರಿಯುವುದಿಲ್ಲ’ ಎಂದು ಹೇಳಿದರು.

‘ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2–ಎ ಪಟ್ಟಿಗೆ ಸೇರ್ಪಡೆ ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಈ ಹಿಂದೆಯೇ ಹೇಳಿದೆ. ಆಯೋಗ ಒಮ್ಮೆ ತಿರಸ್ಕರಿಸಿದ ಮನವಿಯನ್ನು ಪುನರ್ ವಿಚಾರಣೆ ನಡೆಸಿ ನಿರ್ಣಯ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಪಂಚಮಸಾಲಿ ಸಮುದಾಯವು ವೀರಶೈವ– ಲಿಂಗಾಯತದ ಉಪಜಾತಿ ಆಗಿರುವುದರಿಂದ ಮುಖ್ಯ ಜಾತಿಯಿಂದ ಬೇರ್ಪಡಿಸಿ ಬೇರೊಂದು ವರ್ಗಕ್ಕೆ ವರ್ಗಾಯಿಸುವುದು ಸುಪ್ರೀಂಕೋರ್ಟ್‌ ತೀರ್ಪಿಗೆ ವಿರುದ್ಧವಾದ ಕ್ರಮ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎಸ್. ಲಿಂಗಪ್ಪ ತಿಳಿಸಿದರು.

ADVERTISEMENT

‘ಪ್ರವರ್ಗ 2–ಎ ಪಟ್ಟಿಯಲ್ಲಿ ಸದ್ಯ ಇರುವ ಜಾತಿ ಮತ್ತು ಉಪಜಾತಿಗಳಿಗಿಂತ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪಂಚಮಸಾಲಿ ಸಮುದಾಯವು ಕೆಳಮಟ್ಟದಲ್ಲಿ ಇಲ್ಲ. ವಿಧಾನಸಭೆಯಲ್ಲಿ ಆ ಸಮುದಾಯದ 14 ಸದಸ್ಯರಿದ್ದಾರೆ. ಹಾಗೊಂದು ವೇಳೆ ಸೇರ್ಪಡೆ ಮಾಡಿದರೆ ಬಲಹೀನರ ಜತೆಗೆ ಬಲಾಢ್ಯರನ್ನು ಸ್ಪರ್ಧೆಗೆ ಇಳಿಸಿದಂತೆ ಆಗಲಿದೆ’ ಎಂದು ಹೇಳಿದರು.

‘ಅತೀ ಹಿಂದುಳಿದ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲವಾಗಿದೆ. ಈ ಸಂಬಂಧ ಅಧ್ಯಯನ ನಡೆಸಲು ಸರ್ಕಾರ ಆಯೋಗವೊಂದನ್ನು ರಚಿಸಿ ಪಟ್ಟಿ ಸಿದ್ಧಪಡಿಸಬೇಕು. ಆ ಮೂಲಕ ಮೀಸಲಾತಿ ಕಲ್ಪಿಸಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಾಚಾರಿ ಮನವಿ ಮಾಡಿದರು.

‘ಯಾವುದೇ ಜಾತಿಗೂ ಅನ್ಯಾಯ ಆಗದಂತೆ ಕ್ರಮ’

‘ಮೀಸಲಾತಿ ಕೇಳಿ ಮನವಿಗಳು ಸಲ್ಲಿಕೆಯಾಗಿವೆ. ಬೇರೆ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಜಾಗೃತೆ ವಹಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

‘ತಮ್ಮ ಭಾವನೆ ಹೇಳಿಕೊಳ್ಳಲು ಎಲ್ಲರಿಗೂ ಹಕ್ಕಿದೆ. ಪರಿಶೀಲನೆ ಮಾಡುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಹೆಚ್ಚು ಚರ್ಚೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ’ ಎಂದರು.

‘ಅತೀ ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಸಂಬಂಧ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಲು ಮತ್ತೊಂದು ಸಭೆ ಕರೆಯುತ್ತೇನೆ. 73 ಜಾತಿಗಳನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ವಿಷಯದಲ್ಲೂ ಕೂಡಲೇ ಶಿಫಾರಸು ಮಾಡಲಾಗುವುದು. ಜಾತಿ ಸಮೀಕ್ಷೆ ವರದಿಯನ್ನು ಆಯೋಗದ ಈಗಿನ ಅಧ್ಯಕ್ಷರು ಮತ್ತೊಮ್ಮೆ ಪರಿಶೀಲನೆ ನಡೆಸುತ್ತಿದ್ದಾರೆ. ವರದಿ ನೀಡಿದ ಬಳಿಕ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.