ADVERTISEMENT

ಮನೆಗಳಲ್ಲಿ ಮದ್ಯದ ಬಾಟಲಿ; ನಿಯಮ ಸರಳೀಕರಿಸಬೇಕು: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:55 IST
Last Updated 9 ಡಿಸೆಂಬರ್ 2025, 15:55 IST
<div class="paragraphs"><p>ಡಿ.ಕೆ ಶಿವಕುಮಾರ್‌</p></div>

ಡಿ.ಕೆ ಶಿವಕುಮಾರ್‌

   

ಫೇಸ್‌ಬುಕ್‌ ಚಿತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ‘ಕಡಲ ತೀರದ ಪ್ರದೇಶಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ನಡೆಯುತ್ತಿದೆ. ಅದನ್ನು ತಪ್ಪಿಸಲು ಅಧಿಕೃತವಾಗಿಯೇ ಪರವಾನಗಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ADVERTISEMENT

ಮನೆಗಳಲ್ಲಿ ಏಳು ಬಾಟಲಿ ಮದ್ಯ ಮಾತ್ರ ಇಟ್ಟುಕೊಳ್ಳಬೇಕೆಂಬ ನಿಯಮವಿದೆ. ಯಾರೋ ಬಂದು ಬಾಟಲಿ ಉಡುಗೊರೆ ಕೊಡುತ್ತಾರೆ. ಮತ್ಯಾರೋ ಬಂದು ಕೇಸು ಹಾಕುತ್ತಾರೆ. ಇದನ್ನು ತಪ್ಪಿಸಲು ಕ್ರಮಬದ್ಧಗೊಳಿಸಬೇಕು. ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸಲಹೆ ನೀಡಿದರು.

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಡಿ.ಕೆ. ಶಿವಕುಮಾರ್‌, ‘ಸ್ವಿಗ್ಗಿಯಂತಹ ಗಿಗ್‌ ಆ್ಯಪ್‌ಗಳ ಮೂಲಕ ಪ್ರತಿಯೊಂದು ವಸ್ತುವೂ ಮನೆ ಬಾಗಿಲಿಗೆ ಬರುತ್ತಿದೆ. ಮದ್ಯವೂ ಬರುತ್ತಿಲ್ಲ ಎಂಬುದಕ್ಕೆ ಗ್ಯಾರಂಟಿ ಏನು’ ಎಂದರು.

‘ಸದ್ಯ ಕಡಲ ತೀರಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಆದರೆ, ಬೀಚ್‌ಗಳಲ್ಲಿ ಬಿಯರ್‌ ಸಿಗುತ್ತದೆ. ಇದನ್ನು ತಪ್ಪಿಸಲು ಅಧಿಕೃತವಾಗಿ ಅನುಮತಿ ನೀಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ’ ಎಂದು ಶಿವಕುಮಾರ್‌ ಹೇಳಿದರು.

ಬಿಜೆಪಿಯ ಎಸ್‌. ಸುರೇಶ್ ಕುಮಾರ್‌, ‘ಗಿಗ್‌ ವರ್ಕರ್‌ಗಳು ಡ್ರಗ್ಸ್‌ ಕೂಡ ಸರಬರಾಜು ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಅಸಹಾಯಕತೆ ತೋರಿಸಬಾರದು. ಪೊಲೀಸರು ಹಾಗೂ ಅಬಕಾರಿ ಇಲಾಖೆಯವರಿಗೆ ಗೊತ್ತಿಲ್ಲದೆಯೇ ಈ ಅವ್ಯವಹಾರ ಎಲ್ಲವೂ ನಡೆಯುತ್ತಿದೆಯೇ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.