ADVERTISEMENT

ಮದ್ಯ: ವಯಸ್ಸಿನ ಮಿತಿ ಇಳಿಸದಿರಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 16:21 IST
Last Updated 17 ಜನವರಿ 2023, 16:21 IST
   

ಬೆಂಗಳೂರು: ಮದ್ಯ ಖರೀದಿದಾರರ ಕನಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷಗಳಿಂದ 18 ವರ್ಷಕ್ಕೆ ಇಳಿಸುವ ಪ್ರಸ್ತಾವದಿಂದ ರಾಜ್ಯದ ಅಬಕಾರಿ ಇಲಾಖೆ ಹಿಂದೆ ಸರಿದಿದೆ.

ಕರ್ನಾಟಕ ಅಬಕಾರಿ ಪರವಾನಗಿಗಳು (ಸಾಮಾನ್ಯ ಷರತ್ತುಗಳು) ನಿಯಮಗಳು–1967ಕ್ಕೆ ಹಲವು ತಿದ್ದುಪಡಿಗಳನ್ನು ತರಲು ಅಬಕಾರಿ ಇಲಾಖೆಯು ಇದೇ 9 ರಂದು ಕರಡು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಅದರಲ್ಲಿ, ಮದ್ಯ ಖರೀದಿದಾರರ ಕನಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಿರುವ ಸೆಕ್ಷನ್‌ 10(1)(ಇ) ತಿದ್ದುಪಡಿ ಪ್ರಸ್ತಾವವೂ ಇದೆ. ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಕಾರಣದಿಂದ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ಯಾವುದೇ ತಿದ್ದುಪಡಿ ಮಾಡದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಕೆ. ಗೋಪಾಲಯ್ಯ, ‘ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಬಕಾರಿ ಕಾಯ್ದೆ ಮತ್ತು ನಿಯಮಗಳಲ್ಲಿ ವ್ಯತ್ಯಾಸಗಳಿವೆ. ಅವುಗಳನ್ನು ಸರಿಪಡಿಸಲು ತಿದ್ದುಪಡಿ ತರುವ ಪ್ರಸ್ತಾವ ಸಿದ್ಧಪಡಿಸಲಾಗಿದೆ. ವಯಸ್ಸಿನ ಮಿತಿಯೂ ಅದರಲ್ಲಿ ಸೇರಿತ್ತು. ಆದರೆ, ಜನರಿಂದ ವಿರೋಧ ವ್ಯಕ್ತವಾಗುತ್ತಿರುವುದರಿಂದ ಮದ್ಯ ಖರೀದಿದಾರರ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡದಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

ADVERTISEMENT

ಜನರನ್ನು ಕತ್ತಲೆಯಲ್ಲಿಟ್ಟು ನಿಯಮಗಳಲ್ಲಿ ಬದಲಾವಣೆ ಮಾಡುವ ಪ್ರಯತ್ನವನ್ನು ಇಲಾಖೆ ಮಾಡಿಲ್ಲ. ತಿದ್ದುಪಡಿಗಳ ವಿವರಗಳುಳ್ಳ ಕರಡು ನಿಯಮಗಳನ್ನು ಪ್ರಕಟಿಸಿ, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಆಹ್ವಾನಿಸಲಾಗಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿಯಮ ತಿದ್ದುಪಡಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸೆಕ್ಷನ್‌ 10(1)(ಇ)ನಲ್ಲಿರುವ ‘21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ’ ಎಂಬುದನ್ನು ಬದಲಿಸಿ, ‘18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ’ ಎಂಬುದನ್ನು ಸೇರಿಸುವ ಪ್ರಸ್ತಾವ ಕರಡಿನಲ್ಲಿದೆ. ಈ ಕುರಿತು ‘ಪ್ರಜಾವಾಣಿ’ಯ ಜ.12ರ ಸಂಚಿಕೆಯಲ್ಲಿ ‘ಮದ್ಯ: ವಯಸ್ಸಿನ ಮಿತಿ 18ಕ್ಕೆ ಇಳಿಕೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಬಳಿಕ ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿತ್ತು. ವಯಸ್ಸಿನ ಮಿತಿ ಇಳಿಕೆಯನ್ನು ಹಲವರು ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.