ADVERTISEMENT

126 ಅಭ್ಯರ್ಥಿಗಳ ಪಟ್ಟಿ ನ.1ರಂದು ಪ್ರಕಟ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 10:46 IST
Last Updated 19 ಅಕ್ಟೋಬರ್ 2022, 10:46 IST
ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ
ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ   

ಮೈಸೂರು: ‘ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ನ.1ರಂದು ಪ್ರಕಟಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಯಾರೊಂದಿಗೂ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಾಗುವುದು. 123 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದು ನಮ್ಮ ಗುರಿಯಾಗಿದೆ’ ಎಂದು ಹೇಳಿದರು.

‘ಜೆಡಿಎಸ್‌ಗೆ ಅಭ್ಯರ್ಥಿಗಳೇ ಇಲ್ಲ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಅಭ್ಯರ್ಥಿಗಳಿದ್ದಾರೆಯೇ? ಸ್ವತಃ ಸಿದ್ದರಾಮಯ್ಯ ಅವರೇ ಕ್ಷೇತ್ರ ಹುಡುಕುತ್ತಿದ್ದಾರೆ. ಅಭ್ಯರ್ಥಿಗಳಿಲ್ಲದೇ ನಮ್ಮವರನ್ನು ಸೆಳೆಯಲು ಆ ಪಕ್ಷದವರು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಅವಕಾಶವಾದಿಗಳಿಗೆ ಮಣೆ ಹಾಕೋಲ್ಲ:

‘ಬಹಳಷ್ಟು ಮಂದಿ ನಮ್ಮ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ನಮ್ಮ ಪಕ್ಷದಿಂದ ಹೋಗುವವರೆಲ್ಲಾ ಹೋಗಿಯಾಗಿದೆ. ಹೀಗಾಗಿ, ನಮಗೆ ಯಾವುದೇ ಆತಂಕವಿಲ್ಲ. ಈ ಬಾರಿ ಅವಕಾಶವಾದಿಗಳಿಗೆ ಮಣೆ ಹಾಕುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಧಿಕಾರ ಅಥವಾ ಮುಖ್ಯಮಂತ್ರಿ ಗಾದಿ ಪಡೆಯಬೇಕು ಎಂಬ ಉದ್ದೇಶದಿಂದ ನಾನು ಹೋರಾಟ ಮಾಡುತ್ತಿಲ್ಲ. ಈ ದರಿದ್ರಗಳು (ಕಾಂಗ್ರೆಸ್ ಮತ್ತು ಬಿಜೆಪಿ) ಹೋಗಬೇಕಾಗಿದೆ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕಾದರೆ ನಮಗೆ ಸ್ವತಂತ್ರ ಅಧಿಕಾರ ಕೊಡಿ ಎಂದು ಜನರನ್ನು ಕೇಳುತ್ತಿದ್ದೇವೆ. ಅಧಿಕಾರ ಸಿಕ್ಕರೆ, ನಾವು ಘೋಷಿಸಿರುವ ಪಂಚರತ್ನ ಕಾರ್ಯಕ್ರಮ ಅನುಷ್ಠಾನಗೊಳಿಸದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇನೆ’ ಎಂದರು.

ಸ್ವಾಭಿಮಾನದ ಬದುಕು ಕಲ್ಪಿಸುವ ಉದ್ದೇಶ:

‘ರಾಹುಲ್‌ ಗಾಂಧಿ ರಾಜ್ಯದಲ್ಲಿ ಸಿದ್ದರಾಮಯ್ಯ- ಡಿಕೆಶಿ ಜೋಡೊ ಮಾಡಲು ಬಂದಿದ್ದರು. ಅದು ಸಹ ಯಶಸ್ವಿಯಾಗಿಲ್ಲ’ ಎಂದು ವ್ಯಂಗ್ಯವಾಡಿದರು.

‘ದೇಶದಲ್ಲಿ ಮೀಸಲಾತಿ ವ್ಯವಸ್ಥೆಯ ಲಾಭ ಉಳ್ಳವರಿಗೆ ಹೋಗುತ್ತಿದೆಯೋ ಅಥವಾ ಬಲಾಢ್ಯರು ಪಡೆದುಕೊಳ್ಳುತ್ತಿದ್ದಾರೆಯೇ ಎನ್ನುವುದನ್ನು ಗಮನಿಸುವುದು ಮುಖ್ಯ. ಕೆಲವರು ಮೀಸಲಾತಿಗಾಗಿ ಸ್ವಾಮೀಜಿಗಳನ್ನೇ ನಾಯಕರೇ ಬೀದಿಗಿಳಿಸಿದ್ದಾರೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವುದು ಅವರ ಉದ್ದೇಶವಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಮೀಸಲಾತಿ ಮೂಲಕ ಬಡತನ ಹೋಗಲಾಡಿಸುತ್ತೇವೆ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ಎಲ್ಲ ಸಮಾಜಗಳ ಕಲ್ಯಾಣವಾಗಬೇಕು ಎನ್ನುವುದು ನಮ್ಮ ಉದ್ದೇಶ. ಪ್ರತಿ ಕುಟುಂಬಕ್ಕೆ ಸ್ವಾಭಿಮಾನದ ‌ಬದುಕು ಕಲ್ಪಿಸುವುದು ನಮ್ಮ ಗುರಿ. ಇದಕ್ಕಾಗಿಯೇ ದಲಿತರು–ಹಿಂದುಳಿದ ವರ್ಗದವರಿಗೆ ಕಾರ್ಯಕ್ರಮ ರೂಪಿಸಲಿದ್ದೇನೆ. ದಲಿತ ಬಂಧು ಕಾರ್ಯಕ್ರಮದಲ್ಲಿ ಪ್ರತಿ ಕುಟುಂಬಕ್ಕೆ ₹ 10 ಲಕ್ಷ ಸಹಾಯಧನ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.