ADVERTISEMENT

ಎಲ್‌ಕೆಜಿ, ಯುಕೆಜಿ ತರಗತಿ ಆರಂಭ: ಶಿಕ್ಷಕರು, ಸಿಬ್ಬಂದಿಗಿರುವ ನಿಯಮಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 19:45 IST
Last Updated 7 ನವೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಜಿಕೆ ತರಗತಿಗಳು ಸೋಮವಾರ (ನ. 8) ಆರಂಭವಾಗಲಿದೆ.

ಕೋವಿಡ್ ದೃಢ ಪ್ರಮಾಣ ಶೇ 2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಲ್‌ಕೆ‌ಜಿ, ಯುಕೆಜಿ ತರಗತಿಗಳನ್ನು ಅರ್ಧ ದಿನ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ತರಗತಿಗಳನ್ನು ಆರಂಭಿಸುವ ಮೊದಲ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ತರಗತಿಗಳಿಗೆ ಹಾಜರಾಗುವ ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು. ಪ್ರತಿ ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಮಕ್ಕಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಶಾಲೆಯ ಆವರಣದೊಳಗೆ ಪ್ರವೇಶ ನೀಡಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ADVERTISEMENT

ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಕೋವಿಡ್ ಸೋಂಕಿನ ಲಕ್ಷಣ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಯಲ್ಲಿ ಕೋವಿಡ್ ಸೋಂಕು ಲಕ್ಷಣ ಕಂಡುಬಂದರೆ ಶಾಲೆಯನ್ನು ಮುಚ್ಚಿ, ಸ್ಯಾನಿಟೈಸ್ ಮಾಡಬೇಕು. ಸ್ಥಳೀಯ ಆರೋಗ್ಯಾಧಿಕಾರಿಯ ಮಾರ್ಗದರ್ಶನದಂತೆ ಮತ್ತೆ ಶಾಲೆಯನ್ನು ತೆರೆಯಬೇಕು ಎಂದೂ ಸೂಚಿಸಲಾಗಿದೆ.

ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. 50 ವರ್ಷ ದಾಟಿದ ಶಿಕ್ಷಕರು ಹೆಚ್ಚುವರಿಯಾಗಿ ಫೇಸ್ ಶೀಲ್ಡ್ (ಮುಖ ಕವಚ) ಧರಿಸಬೇಕು. ಸುರಕ್ಷಿತವಾದ ಆಹಾರ ಪದಾರ್ಥ ಮತ್ತು ಶುದ್ಧ ಕುಡಿಯುವ ನೀರು ಹೊರತುಪಡಿಸಿ ಬೇರೆ ಯಾವುದೇ ಪದಾರ್ಥ, ವಸ್ತುಗಳು ಮಕ್ಕಳ ಬಾಯಿ, ಮೂಗು ಹಾಗು ಮುಖದ ಸಂಪರ್ಕಕ್ಕೆ ಬಾರದಂತೆ ಕ್ರಮ ವಹಿಸಬೇಕು ಎಂದೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅನುದಾನರಹಿತ ಖಾಸಗಿ ಶಾಲೆಗಳ ಸಂಘಟನೆ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ‘ಎಲ್‌ಕೆಜಿ, ಯುಕೆಜಿ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ಚಿಣ್ಣರ ಬರುವಿಕೆಗೆ ನಾವು ಕಾಯುತ್ತಿದ್ದೇವೆ. 21 ತಿಂಗಳ ಬಳಿಕ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ. ಮಕ್ಕಳಿಗೆ ಭಾಷಾ ಕಲಿಕೆಗೆ ಪ್ರಾಥಮಿಕ ತರಗತಿ ಬಹಳ ಮುಖ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.