ADVERTISEMENT

ಹನುಮಂತನಂತೆ ಎದೆ ಬಗೆದು ತೋರಿಸಬೇಕಿತ್ತಾ

ಸಾಲಮನ್ನಾ ವಿಚಾರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 19:28 IST
Last Updated 21 ಡಿಸೆಂಬರ್ 2018, 19:28 IST
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ನೀಡದ ಕಾರಣ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ನೀಡದ ಕಾರಣ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು   

ಬೆಳಗಾವಿ: ‘ಸಾಲಮನ್ನಾ ವಿಷಯದಲ್ಲಿ ಸದನದ ಮುಂದೆ ಎಲ್ಲ ಅಂಕಿ ಅಂಶಗಳನ್ನು ಇಟ್ಟಿದ್ದೇನೆ. ಯಾವ ರೀತಿ ಸಾಲ ಮನ್ನಾ ಮಾಡುತ್ತೇವೆ ಎಂಬುದನ್ನೂ ಹೇಳಿದ್ದೇನೆ. ಇನ್ನೇನು ನಾನು ಹನುಮಂತನಂತೆ ಎದೆ ಬಗೆದು ತೋರಿಸಬೇಕಿತ್ತಾ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿರೋಧಪಕ್ಷದವರನ್ನು ಪ್ರಶ್ನಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಾಲಮನ್ನಾಕ್ಕೆ ಸಂಬಂಧಿಸಿ ನಾನು ಸದನದಲ್ಲಿ ಕೊಟ್ಟ ಉತ್ತರವನ್ನು ಸಹಿಸಲು ವಿರೋಧಿ ಸ್ನೇಹಿತರಿಗೆ ಆಗಲಿಲ್ಲ. ಈ ಕುರಿತು ನಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಹೊರಟಿದ್ದೆ. ಆರಂಭದಿಂದಲೂ ಸಾಂಗವಾಗಿ ಕಲಾಪಗಳು ನಡೆದಿದ್ದವು. ಮುಂದಿನ ಹೋರಾಟಕ್ಕೆ ವಿಷಯಗಳೇ ಸಿಗಲ್ಲ ಎಂಬ ಕಾರಣಕ್ಕೆ ಕೊನೆಯ ಹಂತದಲ್ಲಿ ಕಲಾಪಕ್ಕೆ ಅಡ್ಡಿಪಡಿಸುವ ತೀರ್ಮಾನವನ್ನು ಬಿಜೆಪಿಯವರು ಮಾಡಿದ್ದಾರೆ’ ಎಂದರು.

‘ಕೊನೆಯ ಹಂತ ಸಾಲಮನ್ನಾದ ಎಲ್ಲ ಮಾಹಿತಿಗಳನ್ನೂ ಸದನದ ಮುಂದಿಡಲು ಸಿದ್ಧನಿದ್ದೆ. ಮಾಹಿತಿ ಇಡಲು ಹೊರಟಾಗ ದಿಢೀರ್‌ ಧರಣಿ ಆರಂಭಿಸಿದರು. ನಾನು ಸದನದಲ್ಲಿ ಮಾಹಿತಿ ನೀಡಿದರೆ ಜನರಿಗೆ ಸಂಪೂರ್ಣ ವಿಚಾರ ತಿಳಿಯುತ್ತದೆ. ಹೀಗಾಗಲು ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಬಿಜೆಪಿ ತೀರ್ಮಾನ ತೆಗೆದುಕೊಂಡಿದೆ’ ಎಂದು ಆರೋಪಿಸಿದರು.

ADVERTISEMENT

‘ನಾನು ದೊಡ್ಡ ಬೃಹಸ್ಪತಿ ಎಂದು ಎಲ್ಲೂ ಹೇಳಿಲ್ಲ. ನಿಮ್ಮ ಅನುಭವವನ್ನು ಸಲಹೆಯಾಗಿ ಸ್ವೀಕರಿಸುತ್ತೇನೆ ಎಂದೇ ಯಡಿಯೂರಪ್ಪನವರಿಗೆ ಹೇಳಿದ್ದೇನೆ’ ಎಂದರು.

‘ನಾನು ಬೃಹಸ್ಪತಿ ಎಂಬ ಅಹಂಕಾರದಿಂದ ಸಾಲಮನ್ನಾ ಯೋಜನೆ ಮಾದರಿ ರಚಿಸಿಲ್ಲ. ಜನರ ಭಾವನೆ ಅರ್ಥ ಮಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದೇನೆ. ಜನರ ತೆರಿಗೆ ಹಣದ ₹ 6.5 ಕೋಟಿ ಸಾಲಮನ್ನಾ ಹೆಸರಿನಲ್ಲಿ ಯಾರೋ ಮಧ್ಯವರ್ತಿ ನುಂಗಿಹಾಕಬಾರದು ಎಂದೇ ಒಂದು ಮಾದರಿ ರಚಿಸಿದೆ. ಅದಕ್ಕಾಗಿ ಈ ಯೋಜನೆಯನ್ನು ಕ್ರಮಬದ್ಧಗೊಳಿಸಲು ಕೆಲವು ತೀರ್ಮಾನ ಮಾಡಿದ್ದೇನೆ’ ಎಂದರು.

‘ಮುಂದಿನ ಬಾರಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿ ಜೊತೆ ಚರ್ಚಿಸುವಾಗ ಯಡಿಯೂರಪ್ಪ ಅವರಿಗೂ ಆಮಂತ್ರಣ ಕೊಡುತ್ತೇವೆ’ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ ನಾಯಕರು ಶನಿವಾರ ದೆಹಲಿಯಲ್ಲಿ ಘೋಷಣೆ ಮಾಡುತ್ತಾರೆ ಎಂದರು.

ಅಧಿವೇಶನವನ್ನು ಸಾಂಗವಾಗಿ ನಡೆಸಲು ಸಹಕರಿಸಿದ ಪೊಲೀಸ್‌ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೂ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.

‘ಧಿಮಾಕು, ಉದ್ಧಟತನದಿಂದ ವರ್ತಿಸುತ್ತಿರುವ ಮುಖ್ಯಮಂತ್ರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು.

ಇನ್ನೂ ಚೆನ್ನಾಗಿ ಅಧಿವೇಶನ ನಡೆಸಬಹುದಿತ್ತು. ವಿರೋಧಪಕ್ಷದ ನಾಯಕರಿಂದ ಲೋಪ ಆಯಿತು. ಬೆಳಗಾವಿ ಅಧಿವೇಶನ ಇಷ್ಟು ಚೆನ್ನಾಗಿ ಯಾವತ್ತೂ ನಡೆದಿಲ್ಲ
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಶುಕ್ರವಾರ ಕರಾಳ ದಿನ ಎಂದು ಭಾವಿಸುವೆ. ಬಿಜೆಪಿಯ ಸ್ವಪ್ರತಿಷ್ಠೆಯಿಂದ ಸದನದಲ್ಲಿ ಕಲಾಪ ವ್ಯರ್ಥವಾಗಿದೆ
-ಬಸವರಾಜ ಹೊರಟ್ಟಿ ವಿಧಾನಪರಿಷತ್‌ ಜೆಡಿಎಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.