ADVERTISEMENT

ಸಾಲಮನ್ನಾ: ಸೇಡಂ, ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಪ್ರಾಯೋಗಿಕ ಜಾರಿ– ಸಿಎಂ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 11:00 IST
Last Updated 5 ನವೆಂಬರ್ 2018, 11:00 IST
   

ಬೆಂಗಳೂರು: ಸಾಲ ಮನ್ನಾ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ನಿರಂತರವಾಗಿ ಖುದ್ದು ಪರಿಶೀಲಿಸುತ್ತಿದ್ದು, ಅಧಿಕಾರಿಗಳ ತಂಡ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯ ವ್ಯಾಪ್ತಿಗೆ ಬರುವ ರೈತರು ಆತಂಕ ಪಡುವೆ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಭೂದಾಖಲೆಗಳು ಮತ್ತು ಸರ್ವೇಕ್ಷಣಾ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ನೇತೃತ್ವದ ತಂಡಸಾಲಮನ್ನಾ ಯೋಜನೆಗಾಗಿ ವಿಶೇಷ ತಂತ್ರಾಂಶ ರೂಪಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಸಾಲಮನ್ನಾ ಯೋಜನೆಗೆ ಅರ್ಹತೆ ಪಡೆದ ರೈತರು ಯಾರೂ ಗಾಬರಿಯಾಗಬೇಕಾಗಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ಸಾಲ ಪಡೆದ ರೈತರ ಮಾಹಿತಿ ಒದಗಿಸಿದ್ದು, ಈ ಮಾಹಿತಿಯನ್ನು ಸರ್ಕಾರ ಅಭಿವೃದ್ಧಿ ಪಡಿಸಿದ ತಂತ್ರಾಂಶದಲ್ಲಿ ಅಳವಡಿಸಿ, ಪರಿಶೀಲನೆ ನಡೆಸಲಾಗುತ್ತಿದೆ.

ADVERTISEMENT

ಮೊದಲಿಗೆ ಸೇಡಂ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಇಂದಿನಿಂದ(ನ. 5) ಪ್ರಾಯೋಗಿಕವಾಗಿ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ತಾಲ್ಲೂಕುಗಳ ಬ್ಯಾಂಕುಗಳ ಶಾಖೆಗಳು ಮಾಹಿತಿ ಪರಿಶೀಲನೆ ಪೂರ್ಣಗೊಳಿಸಿದ ನಂತರ ನ.12ರಿಂದ ರೈತರು ತಾವು ಸಾಲ ಪಡೆದ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಅವರು ಹೊಂದಿರುವ ಕೃಷಿ ಭೂಮಿಯ ಮಾಹಿತಿ ಒದಗಿಸುವಂತೆ ಸೂಚಿಸಲಾಗುವುದು. ನಂತರ ಇತರ ತಾಲ್ಲೂಕುಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಹಕಾರಿ ಬ್ಯಾಂಕುಗಳಲ್ಲಿ ಈಗಾಗಲೇ ಮಾಹಿತಿ ಪರಿಶೀಲನಾ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ ಅಂತ್ಯದೊಳಗೆ 6000 ಶಾಖೆಗಳ 20 ಲಕ್ಷ ರೈತರ ಮಾಹಿತಿ ಪರಿಶೀಲನೆ ನಡೆಸಲಾಗುವುದು.

ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಈ ಯೋಜನೆಯ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಈ ಯೋಜನೆ ಕುರಿತು ರೈತರ ಸಂದೇಹಗಳನ್ನು ಬಗೆಹರಿಸಲು ಶೀಘ್ರವೇ ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.