ADVERTISEMENT

ಸಾಲ ಮನ್ನಾ: ದಾಖಲೆ ನೀಡಲು ನಿರಾಸಕ್ತಿ!

ಶಿವಮೊಗ್ಗ ಜಿಲ್ಲೆಯ 1,06,760 ರೈತರಲ್ಲಿ ಘೋಷಣಾ ಪತ್ರ ಸಲ್ಲಿಸಿದವರ ಸಂಖ್ಯೆ 8 ಸಾವಿರ ದಾಟಿಲ್ಲ

ಚಂದ್ರಹಾಸ ಹಿರೇಮಳಲಿ
Published 24 ಡಿಸೆಂಬರ್ 2018, 19:54 IST
Last Updated 24 ಡಿಸೆಂಬರ್ 2018, 19:54 IST
   

ಶಿವಮೊಗ್ಗ:ರಾಜ್ಯ ಸರ್ಕಾರ ಘೋಷಿಸಿದ ಸಾಲಮನ್ನಾ ಯೋಜನೆಯ ಲಾಭ ಪಡೆಯಲು ಜಿಲ್ಲೆಯ ರೈತರು ನಿರಾಸಕ್ತಿ ತೋರುತ್ತಿರುವ ಅಂಶ ಬಹಿರಂಗವಾಗಿದೆ.

ಸಹಕಾರ ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದ ಜಿಲ್ಲೆಯ ರೈತರು ಡಿ. 15ರಿಂದ ಆಯಾ ಬ್ಯಾಂಕ್‌ಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ಜಿಲ್ಲಾಡಳಿತ ಕೋರಿತ್ತು. ಸಾಲ ಮನ್ನಾ ಪ್ರಕ್ರಿಯೆ ಸಂಬಂಧ ಅನುಸರಿಸಬೇಕಾದ ಕ್ರಮ, ಸಲ್ಲಿಸಬೇಕಾದ ದಾಖಲೆಗಳ ವಿವರವನ್ನೂ ನೀಡಿತ್ತು.

ಸಹಕಾರ ಬ್ಯಾಂಕ್‌ಗಳು ಹಾಗೂ ವಾಣಿಜ್ಯ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಡಿಸೆಂಬರ್‌ 31ರ ಒಳಗೆಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಿ, ಮುದ್ರಿತ ಪ್ರತಿ ಒದಗಿಸುವವಂತೆ ಸೂಚಿಸಿದ್ದರು. 10 ದಿನ ಕಳೆದರೂ ಶೇ 10ರಷ್ಟು ರೈತರೂ ದಾಖಲೆಗಳನ್ನು ಸಲ್ಲಿಸಿಲ್ಲ. ಈ ವಿಷಯದಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ರಾಜ್ಯ ಸರ್ಕಾರದ ಘೋಷಣೆಯಂತೆ ಜಿಲ್ಲೆಯ 1,06,760 ರೈತರು ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ.

72,874 ರೈತರು ವಿವಿಧ ವಾಣಿಜ್ಯ ಬ್ಯಾಂಕುಗಳಿಂದ ₹ 903.08 ಕೋಟಿ ಸಾಲ ಪಡೆದಿದ್ದಾರೆ. 33,886 ರೈತರು ವಿವಿಧ ಸಹಕಾರಿ ಸಂಸ್ಥೆಗಳು, ಬ್ಯಾಂಕ್‌ಗಳಿಂದ ₹ 139.38 ಕೋಟಿ ಸಾಲ ಪಡೆದಿದ್ದಾರೆ. ಒಟ್ಟು ₹ 1,042 ಕೋಟಿ ಸಾಲ ಮನ್ನಾವಾಗುತ್ತದೆ. ಇದುವರೆಗೂ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಿ, ಘೋಷಣಾ ಪತ್ರ ಸಲ್ಲಿಸಿದ ರೈತರ ಸಂಖ್ಯೆ 8 ಸಾವಿರ ದಾಟಿಲ್ಲ.

ADVERTISEMENT

‘ಕೆಲವು ರೈತರು ಎರಡೂ ಕಡೆ (ಸಹಕಾರ ಹಾಗೂ ವಾಣಿಜ್ಯ ಬ್ಯಾಂಕ್‌) ಸಾಲ ಪಡೆದಿದ್ದಾರೆ. ಇಂತಹ ಪ್ರಕರಣ ಪತ್ತೆ ಹಚ್ಚಲು ಜಿಲ್ಲಾಡಳಿತ ಹೊಸ ತಂತ್ರಾಂಶ ಸಿದ್ಧಪಡಿಸಿದೆ. ಯಾರಾದರೂ ಸುಳ್ಳು ಮಾಹಿತಿ ಒದಗಿಸಿದರೆ ತಕ್ಷಣ ಪತ್ತೆಹಚ್ಚಬಹುದು. ಇದರಿಂದ ಎರಡರಲ್ಲಿ ಒಂದು ಕಡೆ ಮನ್ನಾ ಸಾಧ್ಯವಾಗುತ್ತದೆ. ದಾಖಲೆ ಸಲ್ಲಿಕೆಯ ವಿಳಂಬಕ್ಕೆ ಇದೂ ಒಂದು ಕಾರಣ ಇರಬಹುದು. ಆದರೆ, ಇಂತಹ ರೈತರ ಸಂಖ್ಯೆ ತೀರ ಕಡಿಮೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ₹ 2 ಲಕ್ಷದವರೆಗೆ ಸಾಲ ಮನ್ನಾ ಘೋಷಿಸಿತ್ತು. ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ಆ ಪ್ರಕಾರ ರೈತರು ತಮ್ಮ ಪಹಣಿ, ಆಧಾರ್ ಮತ್ತು ಸಾಲ ಪಡೆದ ದಾಖಲೆಯನ್ನು ಬ್ಯಾಂಕ್ ಅಥವಾ ಸಹಕಾರ ಸಂಸ್ಥೆಗಳಿಗೆ ಸಲ್ಲಿಸಬೇಕು. ಜತೆಗೆ, ಸ್ವಯಂ ಘೋಷಣಾ ಪತ್ರ ನೀಡಬೇಕಿದೆ.

‘ಸಹಕಾರ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ ರೈತರು ದಾಖಲೆ ನೀಡುವ ಅಗತ್ಯವಿಲ್ಲ. ಸಾಲ ಪಡೆಯುವಾಗಲೇ ಪಹಣಿ (ಆರ್‌ಟಿಸಿ), ವಂಶವೃಕ್ಷ ಒಳಗೊಂಡಂತೆ ಎಲ್ಲ ದಾಖಲೆಗಳನ್ನು ನೀಡಿರುತ್ತಾರೆ. ಈಗ ಹೊಸದಾಗಿ ದಾಖಲೆ ನೀಡಲು ಕೃಷಿ ಕೆಲಸ ಬಿಟ್ಟು ಅಲೆದಾಡಬೇಕಿದೆ. ಇದು ಸಾಲಮನ್ನಾ ವಿಳಂಬಕ್ಕೆ ಸರ್ಕಾರ ಅನುಸರಿಸುತ್ತಿರುವ ತಂತ್ರ’ ಎಂದು ಟೀಕಿಸುತ್ತಾರೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌.ಆರ್. ಬಸವರಾಜಪ್ಪ.

ಮಲೆನಾಡಿನ ರೈತರು ಅಡಿಕೆ ಕೊಯ್ಲು ಸೇರಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎಲ್ಲ ರೈತರಿಗೂ ಮಾಹಿತಿ ದೊರೆತಿಲ್ಲ. ಸರ್ಕಾರ ದಾಖಲೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಡಿ. 31ರ ಬದಲು ಮಾರ್ಚ್‌ವರೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಾರೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.