ADVERTISEMENT

ಲಾಕ್‌ಡೌನ್‌: ಕಟ್ಟಡಗಳ ನಿರ್ಮಾಣಕ್ಕೂ ‘ಗ್ರಹಣ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 18:36 IST
Last Updated 15 ಏಪ್ರಿಲ್ 2020, 18:36 IST
   

ಬೆಂಗಳೂರು: ಕೊರೊನಾ ಭೀತಿಗೆ ಸಿಲುಕಿ ಒದ್ದಾಡುತ್ತಿದ್ದ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗಿರುವುದರಿಂದ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಸತಿ, ವಾಣಿಜ್ಯ ಕಟ್ಟಡಗಳು ಮತ್ತು ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಕನಸಿನ ಮನೆ ಕಟ್ಟಿಕೊಳ್ಳಲು ಅಥವಾ ಜೀವನದಲ್ಲಿ ಫ್ಲ್ಯಾಟ್‌ ಖರೀದಿಸಲು ಬ್ಯಾಂಕ್‌, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ವಸತಿ ಹಾಗೂ ವಾಣಿಜ್ಯ ಸಂಕೀರ್ಣದಂಥ ದೊಡ್ಡ ಯೋಜನೆಗಳಿಗೆ ಕೈಹಾಕಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಕಾರ್ಮಿಕರ ವಲಸೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಲಾಕ್‌ಡೌನ್‌ ತೆರವಾದರೂ ತಕ್ಷಣಕ್ಕೆ ಕಾರ್ಮಿಕರು ಹಿಂತಿರುಗಿ ಬರಬಹುದು ಎಂಬ ಗ್ಯಾರಂಟಿ ಇಲ್ಲ.

ADVERTISEMENT

ಬೆಂಗಳೂರಿನ ಥಣಿಸಂದ್ರದಲ್ಲಿರುವ ‘ಭಾರತೀಯ ಸಿಟಿ’ಯಲ್ಲಿ ₹ 75ಲಕ್ಷಕ್ಕೆ ಫ್ಲ್ಯಾಟ್‌ ಖರೀದಿ ಮಾಡಿರುವ ಗೃಹಿಣಿ ಅರುಣಾ, ಬ್ಯಾಂಕಿನಿಂದ ₹ 30 ಲಕ್ಷ ಸಾಲ ಪಡೆದಿದ್ದಾರೆ. ‘ನಿಗದಿಯಂತೆ ಮಾರ್ಚ್‌– ಏಪ್ರಿಲ್‌ಗೆ ಫ್ಲ್ಯಾಟ್‌ ಹಸ್ತಾಂತರವಾಗಬೇಕಿತ್ತು. ಈಗ ನವೆಂಬರ್‌– ಡಿಸೆಂಬರ್‌ಗೆ ಹೋಗಿದೆ. ಆದರೆ, ನಾವು ಬ್ಯಾಂಕಿಗೆ ಅಸಲು ಮತ್ತು ಬಡ್ಡಿ ಪಾವತಿಸಬೇಕಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕೆಂಗೇರಿ ಬಂಡೇಮಠದ ಕೆಎಚ್‌ಬಿ 100 ಎಚ್‌.ಪಿ ಕಾಂಪೋಸಿಟ್‌ ಹೌಸಿಂಗ್‌ ಸೈಟ್‌ನಲ್ಲಿ ಮನೆ ಕಟ್ಟುತ್ತಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಪ್ರಮೋದ್‌ ಖುರಪೆ ಬ್ಯಾಂಕಿನಿಂದ ₹ 37 ಲಕ್ಷ ಸಾಲ ಪಡೆದಿದ್ದಾರೆ. ಕಟ್ಟಡ ಕಾರ್ಮಿಕರು ಬಳ್ಳಾರಿ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಂದಿದ್ದರು. ವಾಪಸ್‌ ಹೋಗಿದ್ದಾರೆ. ಸೈಟ್‌ನಲ್ಲೇ ಕಟ್ಟಡ ಸಾಮಗ್ರಿ ಬಿದ್ದಿವೆ’ ಎಂದು ಅಲವತ್ತುಕೊಂಡರು.

ಗುತ್ತಿಗೆದಾರ ಮೈಸೂರಿನ ಲಿಂಗರಾಜ್‌, ಸದ್ಯ ಆರು ಮನೆಗಳನ್ನು ಕಟ್ಟುತ್ತಿದ್ದಾರೆ. ಅವರ ಬಳಿ ಕರ್ನಾಟಕ, ರಾಜಸ್ಥಾನ, ಬಿಹಾರ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ‘ಲಾಕ್‌ಡೌನ್‌ ಆದ ಬಳಿಕ ಊರುಗಳಿಗೆ ಮರಳಿದ್ದಾರೆ. ಕೆಲಸ ನಿಂತಿದೆ. ಮನೆಯ ಮಾಲೀಕರು ಕೆಲಸ ವಿಳಂಬ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.