ADVERTISEMENT

ಬೆಳಗಾವಿ | ಬಡವರಿಗೆ ಮಿಡಿದ ಹಲವು ಹೃದಯಗಳು

ಸಂಘ–ಸಂಸ್ಥೆಗಳಿಂದ ನೆರವು; ಪಾಲಿಕೆಯಿಂದ ಊಟೋಪಚಾರ

ಎಂ.ಮಹೇಶ
Published 5 ಏಪ್ರಿಲ್ 2020, 7:04 IST
Last Updated 5 ಏಪ್ರಿಲ್ 2020, 7:04 IST
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಆಹಾರ ಧಾನ್ಯ, ಅವಶ್ಯ ವಸ್ತುಗಳ ಕಿಟ್‌ಗಳನ್ನು ಪಾಲಿಕೆಗೆ ಹಸ್ತಾಂತರಿಸಿದರು
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಆಹಾರ ಧಾನ್ಯ, ಅವಶ್ಯ ವಸ್ತುಗಳ ಕಿಟ್‌ಗಳನ್ನು ಪಾಲಿಕೆಗೆ ಹಸ್ತಾಂತರಿಸಿದರು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಭೀತಿ ಮತ್ತು ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಕಂಗಾಲಾಗಿರುವ ಕೂಲಿ, ಕಟ್ಟಡ ನಿರ್ಮಾಣ ಹಾಗೂ ವಲಸೆ ಕಾರ್ಮಿಕರು, ಬಡವರು, ಭಿಕ್ಷುಕರಿಗೆ ಹಲವು ಸದೃಯಿಗಳು ಮಿಡಿದಿದ್ದಾರೆ.

ಸರ್ಕಾರದೊಂದಿಗೆ ವಿವಿಧ ಸಂಘ–ಸಂಸ್ಥೆಗಳವರು, ಮಠ ಮಾನ್ಯಗಳವರು, ದಾನಿಗಳು ಕೂಡ ಕೈಗೂಡಿಸಿದ್ದಾರೆ. ಈ ದುರಿತ ಕಾಲದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮಹತ್ವದ ಕಾರ್ಯದಲ್ಲಿ ತೊಡಗಿವೆ.

ಅವರಿದ್ದಲ್ಲಿಗೇ ನಿತ್ಯವೂ ಉಪಾಹಾರ, ಊಟ ತಲುಪಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಕೆಲವು ದಾನಿಗಳು ಅಸಹಾಯಕರಿಗೆ ಒಂದಷ್ಟು ದಿನಗಳಿಗೆ ಸಾಲಬಹುದಾದ ಆಧಾರ ಧಾನ್ಯಗಳು ಅವಶ್ಯ ಸಾಮಗ್ರಿಗಳ ಕಿಟ್‌ಗಳನ್ನು ನೀಡುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ. ಮಾನವೀಯತೆಯ ಸೆಲೆ ಇರುವುದನ್ನು ನಿರೂಪಿಸಿದ್ದಾರೆ.

ADVERTISEMENT

ಪಾಲಿಕೆಗೆ:ನಗರದಲ್ಲಿ ನೇರವಾಗಿ ಆಹಾರ ಧಾನ್ಯ ವಿತರಣೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಹೀಗಾಗಿ, ದಾನಿಗಳು ನಗರಪಾಲಿಕೆ ಮೂಲಕ ನೀಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‌ ಮಾಸ್ಟರ್‌ ಕಿಚನ್‌ನಲ್ಲಿ ಅಡುಗೆ ಮಾಡಿ ಆಹಾರ ಪೂರೈಸಲಾಗುತ್ತಿದೆ. ಸ್ವಾದಾರಗಳಿಗೆ, ಕಾರ್ಮಿಕರಿಗೆ ಪಾಲಿಕೆಯಿಂದ ಊಟ ಪೂರೈಸಲಾಗುತ್ತಿದೆ. ವಿವಿಧ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವ ಹೊರರಾಜ್ಯಗಳ ವಲಸೆ ಕಾರ್ಮಿಕರಿಗೆ ಅಲ್ಲೇ ಊಟ ತಯಾರಿಕೆ ನೀಡಲಾಗುತ್ತಿದೆ.

ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ50 ಕೂಲಿಕಾರರು ಹಾಗೂ ಬಡವರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯವನ್ನು ಪಾಲಿಕೆ ಮೂಲಕ ವಿತರಿಸಿದ್ದಾರೆ. ಅಕ್ಕಿ, ಸಕ್ಕರೆ, ಸಾಬೂನು, ಟೂಥ್‌ ಪೇಸ್ಟ್‌, ಎಣ್ಣೆ, ಜೀರಿಗೆ, ಸಾಸಿವೆ ಮತ್ತಿತರ ವಸ್ತುಗಳನ್ನು ನೀಡಿದ್ದಾರೆ.

ಚಂದರಗಿ ನೆರವು:ಜಿಲ್ಲೆ ವಿವಿಧೆಡೆಯಿಂದ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಅನೇಕ ಲಂಬಾಣಿ ತಾಂಡಾಗಳಿಂದ ನಗರಕ್ಕೆ ದುಡಿಯಲು ಬಂದಿದ್ದ ಹಾಗೂ ಲಾಕ್‌ಡೌನ್‌ನಿಂದ ಅತಂತ್ರವಾಗಿರುವ 25 ಕುಟುಂಬಗಳಿಗೆ ದಿನಸಿ ವಿತರಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾನವೀಯತೆ ಮೆರೆದಿದ್ದಾರೆ.

ಶಾಹೂನಗರ, ಅಜಂ ನಗರ, ನೆಹರು ನಗರ ಮತ್ತು ವೈಭವ ನಗರಗಳಲ್ಲಿ ಈ ಜನರು ವಾಸವಾಗಿದ್ದಾರೆ. ಹಲವು ದಿನಗಳಿಂದ ಕೆಲಸವಿಲ್ಲದೆ ಗಳಿಕೆಯಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆ ಕುಟುಂಬಗಳಿಗೆ 15 ದಿನಗಳಿಗೆ ಆಗುವಷ್ಟು ಅಕ್ಕಿ, ತೊಗರಿ ಬೇಳೆ, ಅಡುಗೆ ಎಣ್ಣೆ, ಬಟ್ಟೆ ತೊಳೆಯುವ ಸಾಬೂನು, ಸ್ನಾನದ ಸಾಬೂನು, ಸಾಸಿವೆ, ಜೀರಿಗೆ ಕೊಡಿಸಿದ್ದಾರೆ.

ವಿವಿಧೆಡೆ

ಸವದತ್ತಿ ಪಟ್ಟಣದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಆಹಾರ ಒದಗಿಸುತ್ತಿದ್ದಾರೆ. ಗೋಕಾಕ ತಾಲ್ಲೂಕಿನ ಶಿವಾಪೂರ (ಕೋ.) ಗ್ರಾಮದ ದಾನಮ್ಮದೇವಿ ಸ್ವ-ಸಹಾಯ ಮಹಿಳಾ ಸಂಘದ ಸದಸ್ಯೆಯರು ಪಿಎಂ ಕೇರ್ಸ್‌ ನಿಧಿಗೆ ₹ 25ಸಾವಿರ ದೇಣಿಗೆ ನೀಡಿದ್ದಾರೆ.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ (ಸಿ.ಐ.ಟಿ.ಯು) ನಿಪ್ಪಾಣಿ ತಾಲ್ಲೂಕು ಘಟಕ ದುಡಿಯುವ ಜನರಿಗೆ ಆಸರೆಯಾಗಿದೆ. ಬೀಡಿ ಕಟ್ಟುವವರು ಹಾಗೂ ಇತರ ಕಾರ್ಮಿಕರನ್ನೊಳಗೊಂಡು 160 ಕುಟುಂಬಗಳಿಗೆ ಅಕ್ಕಿ–ಬೇಳೆ ವಿತರಿಸಿದ್ದಾರೆ.

‘ಪಾಲಿಕೆಯಿಂದ ನಿತ್ಯ ಸರಾಸರಿ 350 ಮಂದಿಗೆ ಊಟ, ಉಪಾಹಾರ ಒದಗಿಸುತ್ತಿದ್ದೇವೆ. ಇವರಲ್ಲಿ ಬೇರೆ ರಾಜ್ಯಗಳಿಂದ ದುಡಿಯಲು ಬಂದಿದ್ದವರು, ಭಿಕ್ಷುಕರು, ರಸ್ತೆಬದಿ ತಾತ್ಕಾಲಿಕ ಟೆಂಟ್‌ಗಳಲ್ಲಿ ಉಳಿದಿರುವವರು ಸೇರಿದ್ದಾರೆ. ಹಲವು ಮಂದಿ ದಾನಿಗಳು ಕೂಡ ದಿನಸಿ ಮೊದಲಾದ ಪದಾರ್ಥಗಳನ್ನು ದೇಣಿಗೆ ನೀಡಿ ಸಹಾಯ ಹಸ್ತ ಚಾಚಿದ್ದಾರೆ’ ಎಂದು ನಗರಪಾಲಿಕೆ ಎಂಜಿನಿಯರ್‌ ಲಕ್ಷ್ಮಿ ಸುಳಗೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ನೆರವಾಗುವವರು ಮೊ: 9449193973 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.