ADVERTISEMENT

ಲಾಕ್‌ಡೌನ್: ಸಂಕಷ್ಟದಲ್ಲಿ ಮೂತ್ರಪಿಂಡ ರೋಗಿಗಳು

ಲಾಕ್‌ ಡೌನ್‌ನಿಂದ ಡಯಾಲಿಸಿಸ್‌ ಸಮಸ್ಯೆ, ಅಗತ್ಯ ಔಷಧಿಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 21:08 IST
Last Updated 9 ಏಪ್ರಿಲ್ 2020, 21:08 IST
ಮೂತ್ರಪಿಂಡ
ಮೂತ್ರಪಿಂಡ   

ಬೆಂಗಳೂರು:‌‌‌ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿರುವವರುಕೊರೊನಾ ಸೋಂಕು ಭೀತಿ ಹಾಗೂ ಲಾಕ್‌ ಡೌನ್‌ನಿಂದಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಲಾಗುತ್ತಿಲ್ಲ.

ಕೋವಿಡ್‌–19 ಪ್ರಕರಣ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳನ್ನೂ ಕೊರೊನಾ ಸೋಂಕಿತರಿಗೆ ಮೀಸಲಿಡಲಾಗುತ್ತಿದೆ. ಇದರಿಂದಾಗಿ ಅಲ್ಲಿನ ಡಯಾಲಿಸಿಸ್ ಘಟಕಗಳಲ್ಲಿ ಸೇವೆ ನೀಡುವುದು ಸಮಸ್ಯೆಯಾಗಿದ್ದು, ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾತ್ರ ವಾರಕ್ಕೆ ಮೂರು ಬಾರಿ ನಿಯಮಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಉಳಿದವರಿಗೆ ವಾರಕ್ಕೆ ಒಂದರಿಂದ ಎರಡು ಸಲ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ. ಹೊಸದಾಗಿ ಯಾವುದೇ ರೋಗಿಯನ್ನು ನೋಂದಾಯಿಸಿಕೊಳ್ಳದಿರುವುದು ಮೂತ್ರಪಿಂಡ ಸಮಸ್ಯೆ ಇರುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಲಾಕ್‌ ಡೌನ್‌ ನಿಂದಾಗಿ ಕೆಲವರು ಡಯಾಲಿಸಿಸ್ ಕೇಂದ್ರಗಳಿಗೆ ತೆರಳಲೂ ಸಾಧ್ಯವಾಗದೆ ಮನೆಯಲ್ಲಿಯೇ ನೋವು ಅನುಭವಿಸುತ್ತಿದ್ದಾರೆ.

ಕಿಡ್ನಿ ಸಮಸ್ಯೆ ಗಂಭೀರವಾಗಿರುವವರಿಗೆ ಕಸಿಯನ್ನು ಮುಂದೂಡಿ ಡಯಾಲಿಸಿಸ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸದ್ಯ 3,500 ಮಂದಿ ಅಂಗಾಂಗ ಕಸಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಅರ್ಧದಷ್ಟು ಮಂದಿ ಮೂತ್ರಪಿಂಡ ವೈಫಲ್ಯದ ರೋಗಿಗಳೇ ಆಗಿದ್ದಾರೆ.ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ.

ADVERTISEMENT

‘ಕೆಲ ತಿಂಗಳುಗಳಿದ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ನನಗೆ ಈಗ ವಾರಕ್ಕೆ ಒಮ್ಮೆ ಮಾಡಿಸಿಕೊಳ್ಳುವುದೂ ಕಷ್ಟವಾಗಿದೆ’ ಎಂದು 58 ವರ್ಷದ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಔಷಧಿ ಕೊರತೆ: ಡಯಾಲಿಸಿಸ್‌ಗೆ ಅಗತ್ಯವಿರುವ ಔಷಧಿಗಳ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿ, ಶಸ್ತ್ರಚಿಕಿತ್ಸಕರಿಗೆ ಆರೋಗ್ಯ ಇಲಾಖೆ ಸೂಚಿಸಿದೆ. ಆದರೂ ಈಗಾಗಲೇ ಕೆಲ ಜಿಲ್ಲಾ ಆಸ್ಪತ್ರೆಗಳಲ್ಲಿ ಔಷಧಿ ಪರಿಕರಗಳ ಕೊರತೆ ಎದುರಾಗಿದೆ.

ಮನೆಯಲ್ಲಿಯೇ ಮಾಡಿಕೊಳ್ಳುವ ಪೆರಿಟೋನಿಯಲ್ ಡಯಾಲಿಸ್‌ಗೂ ಸಮಸ್ಯೆಯಾಗಿದೆ. ಅಗತ್ಯ ಪ್ರಮಾಣದಲ್ಲಿ ದ್ರವಾಂಶಗಳು ಸಿಗದ ಪರಿಣಾಮ ಅವರು ಕೂಡ ಡಯಾಲಿಸಿಸ್ ಕೇಂದ್ರಗಳ ಕಡೆ ಹೋಗುವುದು ಅನಿವಾರ್ಯವಾಗಿದೆ.

ಡಯಾಲಿಸಿಸ್‌ ಮಾಡಲು ಬೇಕಾದ ಅಗತ್ಯ ಔಷಧಿ ಪರಿಕರಗಳು ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಲಾಕ್‌ಡೌನ್‌ ಇದ್ದರೂ ಚಿಕಿತ್ಸೆಗೆ ಹೋಗಬಹುದು

- ಓಂ ಪ್ರಕಾಶ್ ಪಾಟೀಲ್, ಆರೋಗ್ಯ ಇಲಾಖೆ ನಿರ್ದೇಶಕ

‘ರೋಗಿಗಳ ಸಂಖ್ಯೆ ಇಳಿಮುಖ’

‘ಈ ಹಿಂದೆ ಪ್ರತಿನಿತ್ಯ 80 ರಿಂದ 90 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಈಗ ಲಾಕ್‌ ಡೌನ್‌ನಿಂದ ಬರುವವರ ಸಂಖ್ಯೆ ಕಡಿಮೆಯಾಗಿದೆ. ಈಗಲೂ ನಿತ್ಯ 50ರಿಂದ 60 ಮಂದಿಗೆ ಡಯಾಲಿಸಿಸ್ ಮಾಡುತ್ತಿದ್ದೇವೆ. ಉಳಿದ ರೋಗಿಗಳಿಗೂ ಚಿಕಿತ್ಸೆಗೆ ಬರುವಂತೆ ಮೊಬೈಲ್ ಮೂಲಕ ಸಂದೇಶ ಕಳುಹಿಸಲಾಗುತ್ತಿದೆ.28 ಮಂದಿ ಮನೆಯಲ್ಲಿಯೇಪೆರಿಟೋನಿಯಲ್ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದಾರೆ’ ಎಂದು ನೆಪ್ರೊ ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ. ಕೇಶವಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.