ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಪದಚ್ಯುತಿಗೊಳಿಸುವುದಕ್ಕೆ ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿಯ ಮೂರು ಮಸೂದೆಗಳ ಮಂಡನೆ ಸಂದರ್ಭದಲ್ಲಿ ಲೋಕಸಭೆಯಲ್ಲಿ ಬುಧವಾರ ಕೋಲಾಹಲ ಸೃಷ್ಟಿಯಾಯಿತು.
ಸರ್ಕಾರದ ಪ್ರಸ್ತಾವಕ್ಕೆ ಒಕ್ಕೊರಲಿನಿಂದ ತೀವ್ರ ವಿರೋಧ ವ್ಯಕ್ತಪಡಿಸಿದ ‘ಇಂಡಿಯಾ’ ಕೂಟದ ಸಂಸದರು ಸದನದಲ್ಲಿ ಗದ್ದಲ ಎಬ್ಬಿಸಿದರು. ಟಿಎಂಸಿಯ ಸಂಸದರು ಮಸೂದೆಗಳ ಪ್ರತಿಗಳನ್ನು ಹರಿದು ಗೃಹ ಸಚಿವರತ್ತ ಎಸೆದರು. ಬಿಜೆಪಿ ಹಾಗೂ ಟಿಎಂಸಿ ಸದಸ್ಯರು ಸಂಘರ್ಷಕ್ಕೆ ಅಣಿಯಾದರು. ಸದನದಲ್ಲಿ ನಾಟಕೀಯ ವಿದ್ಯಮಾನಗಳು ಘಟಿಸಿದವು.
ಸಂವಿಧಾನ (130ನೇ ತಿದ್ದುಪಡಿ) ಮಸೂದೆ–2025, ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳ ಸದಸ್ಯರು, ‘ಸರ್ಕಾರವು ತರಾತುರಿಯಿಂದ ಸಂವಿಧಾನ ವಿರೋಧಿ ಮಸೂದೆ ಮಂಡಿಸಿದೆ’ ಎಂದು ಜರೆದರು. ವಿಪಕ್ಷಗಳ ಆರೋಪವನ್ನು ಶಾ ತಳ್ಳಿ ಹಾಕಿದರು. ಈ ಮಸೂದೆಗಳನ್ನು ಪರಿಶೀಲನೆಗೆ ಸಂಸತ್ತಿನ ಜಂಟಿ ಸಮಿತಿಗೆ (ಜೆಪಿಸಿ) ಒಪ್ಪಿಸಲಾಗಿದೆ ಎಂದೂ ಅವರು ತಿಳಿಸಿದರು.
‘ಜೆಪಿಸಿಯಲ್ಲಿ ಲೋಕಸಭೆಯ 21 ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರು ಇರಲಿದ್ದಾರೆ. ಮುಂದಿನ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಸಮಿತಿಯು ತನ್ನ ವರದಿ ಸಲ್ಲಿಸಲಿದೆ’ ಎಂದು ಶಾ ತಿಳಿಸಿದರು. ಸದಸ್ಯರ ಹೆಸರುಗಳನ್ನು ಲೋಕಸಭಾಧ್ಯಕ್ಷ ಓಂಬಿರ್ಲಾ ಶೀಘ್ರ ಅಂತಿಮಗೊಳಿಸಲಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ ಮೂರನೇ ವಾರದಲ್ಲಿ ನಡೆಯುವ ಸಂಭವ ಇದೆ.
ಮಧ್ಯಾಹ್ನ ಎರಡು ಗಂಟೆಗೆ ಮಸೂದೆಗಳನ್ನು ಮಂಡಿಸಿದ ತಕ್ಷಣ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಟಿಎಂಸಿ ಸಂಸದರು ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಎದುರು ದೌಡಾಯಿಸಿದರು. ಕೆಲವರು ಶಾ ಅವರ ಮುಂದೆ ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸಂಸದರ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ ನಡೆಯಿತು. ಟಿಎಂಸಿ ಸಂಸದರೊಬ್ಬರು ಶಾ ಬಳಿ ಕಾಗದಗಳನ್ನು ಎಸೆದು ಮೈಕ್ ಹಿಡಿಯುತ್ತಿದ್ದಂತೆ, ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ರವನೀತ್ ಸಿಂಗ್ ಬಿಟ್ಟೂ ಗೃಹ ಸಚಿವರತ್ತ ಧಾವಿಸಿದರು ಮತ್ತು ಬಿಜೆಪಿಯ ಇತರ ಸಂಸದರು ಅವರನ್ನು ಹಿಂಬಾಲಿಸಿದರು. ಗದ್ದಲ ಜಾಸ್ತಿಯಾದ ಕಾರಣಕ್ಕೆ ಸದನವನ್ನು ಮೂರು ಗಂಟೆಗೆ ಮುಂದೂಡಲಾಯಿತು. ಆ ನಂತರವೂ, ವಿರೋಧ ಪಕ್ಷದ ಸದಸ್ಯರು ಜೋರಾಗಿ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಆಡಳಿತ-ವಿಪಕ್ಷ ಸದಸ್ಯರು ಆರೋಪ ಪ್ರತ್ಯಾರೋಪಗಳನ್ನು ಮಾಡಿದರು. ದಾಳಿ ಮಾಡಿದ್ದಾರೆ ಎಂದು ಎರಡೂ ಕಡೆಯವರು ಹೇಳಿಕೊಂಡರು. ಲೋಕಸಭಾಧ್ಯಕ್ಷರಿಗೆ ಉಭಯ ಬಣದವರು ದೂರುಗಳನ್ನು ಸಲ್ಲಿಸಿದರು.
ಏಟು-ಎದುರೇಟು
ಮಸೂದೆಯನ್ನು ಕಟು ಪದಗಳಲ್ಲಿ ವಿರೋಧಿಸಿದ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್, ‘ಗುಜರಾತ್ ಗೃಹ ಸಚಿವರಾಗಿದ್ದಾಗ ಅಮಿತ್ ಶಾ ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಈ ಮಸೂದೆ ತರಲು ಯಾವ ನೈತಿಕ ಹಕ್ಕು ಇದೆ’ ಎಂದು ಪ್ರಶ್ನಿಸಿದರು.
ಕೂಡಲೇ ಕೋಪದಿಂದ ಎದ್ದು ನಿಂತು ಪ್ರತಿಕ್ರಿಯಿಸಿದ ಶಾ, ‘ಬಂಧನಕ್ಕೆ ಮುನ್ನವೇ ನೈತಿಕ ಆಧಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬಿಡುಗಡೆಯಾದ ನಂತರ ಸಂಪುಟಕ್ಕೆ ಸೇರಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿ ಇರುವಷ್ಟು ನಾಚಿಕೆಗೇಡಿನ ವ್ಯಕ್ತಿ ಆಗಿಲ್ಲʼ ಎಂದು ಶಾ ಹೇಳಿದರು.
ಆರೋಪ-ಪ್ರತ್ಯಾರೋಪ
ಕಲಾಪ ಮುಂದೂಡಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಬಿಜೆಪಿಯ ಸಂಬಿತ್ ಪಾತ್ರಾ, ‘ಮಸೂದೆಗಳ ಪ್ರತಿಗಳನ್ನು ಸಚಿವರ ಕಡೆಗೆ ಎಸೆಯಲಾಯಿತು. ವಿಪಕ್ಷಗಳ ನಡೆಯು ಸದನಕ್ಕೆ ಕಪ್ಪು ಚುಕ್ಕೆ’ ಎಂದು ದೂರಿದರು. ಟಿಎಂಸಿ ಸಂಸದೆ ಮಿಥಾಲಿ ಬಾಗ್, ‘ಇಬ್ಬರು ಸಚಿವರು ನನ್ನನ್ನು ತಳ್ಳಿದರು. ಇದರಿಂದ ಗಾಯಗೊಂಡೆ’ ಎಂದು ಆರೋಪಿಸಿದರು. ‘ನಾನು ಮಸೂದೆಗಳ ಪ್ರತಿ ಹರಿದು ಹಾಕಲಿಲ್ಲ. ಸಂವಿಧಾನ ವಿರೋಧಿ ಮಸೂದೆ ಪ್ರತಿಗಳನ್ನು ಹರಿದು ಹಾಕಿದವರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ’ ಎಂದು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಹೇಳಿದರು.
ಮೂರನೇ ಸಾಲಿನಲ್ಲಿ ಕುಳಿತ ಶಾ
ಮಧ್ಯಾಹ್ನ 3 ಗಂಟೆಗೆ ಸದನ ಮತ್ತೆ ಸೇರಿದಾಗ, ಶಾ ಅವರು ಮೂರನೇ ಸಾಲಿನಲ್ಲಿ ಕುಳಿತರು. ಯಾವುದೇ ಸಚಿವರು ಮೊದಲ ಎರಡು ಸಾಲುಗಳಲ್ಲಿ ಕುಳಿತುಕೊಳ್ಳಲಿಲ್ಲ. ಪ್ರತಿಭಟನೆನಿರತ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಇದ್ದದ್ದೇ ಇದಕ್ಕೆ ಕಾರಣ. ಗದ್ದಲ ತಪ್ಪಿಸಲು ಹನ್ನೆರಡು ಪುರುಷ ಮತ್ತು ಇಬ್ಬರು ಮಹಿಳಾ ಮಾರ್ಷಲ್‌ಗಳನ್ನು ನಿಯೋಜಿಸಲಾಗಿತ್ತು.
ಘೋಷಣೆಗಳ ನಡುವೆಯೇ ಸಚಿವರು ಮಸೂದೆಗಳನ್ನು ಮಂಡಿಸಿದರು. ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಜಂಟಿ ಸಮಿತಿಗೆ ಕಳುಹಿಸಲು ಪ್ರಸ್ತಾವ ಮಂಡಿಸಿದರು. ಧ್ವನಿಮತದ ಮೂಲಕ ನಿರ್ಣಯ ಅಂಗೀಕರಿಸಲಾಯಿತು. ಕಲಾಪವನ್ನು ಸಂಜೆ ಐದಕ್ಕೆ ಮುಂದೂಡಲಾಯಿತು.
ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕಾನೂನಿನ ವ್ಯಾಪ್ತಿಗೆ ತರಲು ಸಾಂವಿಧಾನಿಕ ತಿದ್ದುಪಡಿ ತಂದಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ನೇತೃತ್ವದಲ್ಲಿ ಇಡೀ ವಿರೋಧ ಪಕ್ಷಗಳು ಸರ್ಕಾರಗಳನ್ನು ಜೈಲಿನಿಂದ ನಡೆಸಲು ಮತ್ತು ಅಧಿಕಾರಕ್ಕೆ ಅಂಟಿಕೊಂಡಿರಲು ಮಸೂದೆಗಳನ್ನು ವಿರೋಧಿಸಿವೆ.– ಅಮಿತ್ ಶಾ, ಕೇಂದ್ರ ಗೃಹ ಸಚಿವ
ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರಂತಹ ಮಿತ್ರಪಕ್ಷಗಳ ನಾಯಕರಿಗೆ ಬೆದರಿಕೆ ಒಡ್ಡಲು ಗೃಹ ಸಚಿವರು ಈ ಅಪಾಯಕಾರಿ ಮಸೂದೆ ತಂದಿದ್ದಾರೆ. ಈ ಮಸೂದೆಯು ಸಾಂವಿಧಾನಿಕ ಒಕ್ಕೂಟ ತತ್ವಗಳ ಹೃದಯಭಾಗಕ್ಕೆ ದಾಳಿ ಮಾಡುತ್ತದೆ. ವಿರೋಧ ಪಕ್ಷಗಳ ಸರ್ಕಾರಗಳನ್ನು ಹಣಿಯುವ ದುರುದ್ದೇಶವೂ ಈ ಮಸೂದೆ ಹಿಂದಿದೆ.– ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಸಂಸದ
ಈ ಮಸೂದೆಗಳು ಸಂವಿಧಾನದ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಮಸೂದೆಗಳು ಕ್ರಿಮಿನಲ್ ನ್ಯಾಯದ ನ್ಯಾಯಶಾಸ್ತ್ರಕ್ಕೆ ವಿರುದ್ಧವಾಗಿವೆ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತವೆ. ಜತೆಗೆ, ರಾಜಕೀಯ ದುರುಪಯೋಗಕ್ಕೆ ಹೆಬ್ಬಾಗಿಲು ತೆರೆಯುತ್ತವೆ.– ಮನೀಷ್ ತಿವಾರಿ, ಕಾಂಗ್ರೆಸ್ ಸಂಸದ
ಅನಗತ್ಯ ಆತುರ ತೋರಿ ಈ ಮಸೂದೆಗಳನ್ನು ಪರಿಚಯಿಸಲಾಗುತ್ತಿದೆ. ಸದನದ ಕಾರ್ಯವಿಧಾನಗಳ ಪ್ರಕಾರ ಈ ಮಸೂದೆಗಳನ್ನು ಮಂಡಿಸಿಲ್ಲ. ಮಸೂದೆಗಳ ಪ್ರತಿಗಳನ್ನು ಸದನದ ಸದಸ್ಯರಿಗೆ ಏಳು ದಿನ ಮುಂಚಿತವಾಗಿ ನೀಡಬೇಕಿತ್ತು.– ಎನ್.ಕೆ.ಪ್ರೇಮಚಂದ್ರನ್, ಆರ್‌ಎಸ್‌ಪಿ ಸಂಸದ
ಈ ಸರ್ಕಾರ ಪೊಲೀಸ್ ರಾಜ್ಯ ರಚಿಸಲು ಮುಂದಾಗಿದೆ. ಇದು ಚುನಾಯಿತ ಸರ್ಕಾರಕ್ಕೆ ಮರಣದಂಡನೆಯಾಗುತ್ತದೆ. ಕ್ಷುಲ್ಲಕ ಆರೋಪಗಳು ಹಾಗೂ ಅನುಮಾನದ ಆಧಾರದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಲು ಈ ಮಸೂದೆಗಳು ಅನುವು ಮಾಡಿಕೊಡುತ್ತವೆ.– ಅಸಾದುದ್ದೀನ್ ಓವೈಸಿ, ಎಐಎಂಐಎಂ ಸಂಸದ
ತರೂರ್ ಒಡಕು ಧ್ವನಿ
ನೀವು 30 ದಿನ ಜೈಲಿನಲ್ಲಿ ಇದ್ದರೆ ಸಚಿವರಾಗಿ ಮುಂದುವರಿಯಬಹುದೇ? ಇದು ಸಾಮಾನ್ಯ ಜ್ಞಾನ. ಇದರಲ್ಲಿ ನನಗೆ ಯಾವುದೇ ತಪ್ಪು ಕಾಣುತ್ತಿಲ್ಲ. ಮಸೂದೆಯನ್ನು ಪರಾಮರ್ಶೆಗೆ ಜೆಪಿಸಿಗೆ ಒಪ್ಪಿಸಿರುವುದು ಉತ್ತಮ ನಡೆ.– ಶಶಿ ತರೂರ್, ಕಾಂಗ್ರೆಸ್ ಸಂಸದ (ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.