ADVERTISEMENT

Lok Sabha Elections | ನಾಲ್ಕು ತಂಡಗಳಲ್ಲಿ ಬಿಜೆಪಿ ನಾಯಕರ ಪ್ರವಾಸ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:37 IST
Last Updated 23 ಫೆಬ್ರುವರಿ 2024, 15:37 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಕೇಂದ್ರದ ನಾಯಕರ ಜತೆಗೂಡಿ ಮುಂದಿನ ವಾರದಿಂದ ನಾಲ್ಕು ತಂಡಗಳಲ್ಲಿ ರಾಜ್ಯ ಪ್ರವಾಸ ಆರಂಭಿಸಲು ಬಿಜೆಪಿ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್‌ವಾಲ್‌ ಉಪಸ್ಥಿತಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ಪಕ್ಷಸ ಸಂಸದೀಯ ಮಂಡಳಿ ಸದಸ್ಯ ಬಿ.ಸ್‌. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿದ್ದರು.

ADVERTISEMENT

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌, ‘28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವಿನ ಅವಕಾಶವಿದೆ ಎಂಬ ವರದಿಗಳಿವೆ. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರನ್ನು ಒಳಗೊಂಡ ತಂಡಗಳು ಲೋಕಸಭಾ ಕ್ಷೇತ್ರವಾರು ಪ್ರವಾಸ ಮಾಡಲಿವೆ’ ಎಂದರು.

ಕೇಂದ್ರದ ನಾಯಕರು ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಂದು ದಿನ ಪ್ರವಾಸ ಮಾಡುವರು. ಅಲ್ಲಿ ಐದು ಹಂತದ ಕಾರ್ಯಕ್ರಮ ನಡೆಸಲಾಗುವುದು.  ಬೂತ್ ಸಮಿತಿ ಅಧ್ಯಕ್ಷರು, ಬೂತ್ ಪ್ರಮುಖರು, ಫಲಾನುಭವಿಗಳ ಸಭೆಗಳನ್ನು ನಡೆಸಿ ಮತ ಸಳೆಯಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

‘ಕ್ಲಸ್ಟರ್ ಮಟ್ಟದಲ್ಲೂ ಪ್ರವಾಸ ಆರಂಭವಾಗಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಲಬುರಗಿಯಲ್ಲಿ ಈಗಾಗಲೇ ಪ್ರವಾಸ ಮಾಡಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಶೀಘ್ರದಲ್ಲಿ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.