ADVERTISEMENT

ಲೋಕಸಭೆ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದ ಎಸ್‌ಟಿಎಸ್‌, ಹೆಬ್ಬಾರ್‌?

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
<div class="paragraphs"><p>ಎಸ್‌.ಟಿ. ಸೋಮಶೇಖರ್‌</p></div>

ಎಸ್‌.ಟಿ. ಸೋಮಶೇಖರ್‌

   

ಬೆಂಗಳೂರು: ಬಿಜೆಪಿ ತ್ಯಜಿಸಿ ಮರಳಿ ‘ಕೈ’ ಹಿಡಿಯಲು ಮುಂದಾಗಿರುವ ಶಾಸಕರಾದ ಎಸ್‌.ಟಿ. ಸೋಮಶೇಖರ್‌ (ಯಶವಂತಪುರ) ಮತ್ತು ಶಿವರಾಮ ಹೆಬ್ಬಾರ್‌ (ಯಲ್ಲಾಪುರ) ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಆಹ್ವಾನ ನೀಡಿದ್ದರೂ, ಈ ಇಬ್ಬರೂ ಕಣಕ್ಕಿಳಿಯಲು ನಿರಾಕರಿಸಿದ್ದಾರೆ.

ಏಳು ಕ್ಷೇತ್ರಗಳಿಗೆ ಶುಕ್ರವಾರ ಟಿಕೆಟ್‌ ಘೋಷಿಸಿರುವ ಕಾಂಗ್ರೆಸ್‌, ಇನ್ನೂ 21 ಕ್ಷೇತ್ರಗಳಿಗೆ ಕದನ ಕಲಿಗಳ ಹುಡುಕಾಟದಲ್ಲಿದೆ. ಕೆಲವು ಕ್ಷೇತ್ರಗಳಿಗೆ ಪಕ್ಷದ ರಾಜ್ಯ ಘಟಕ ಶಿಫಾರಸು ಮಾಡಿರುವ ಹೆಸರುಗಳ ಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವರಿಷ್ಠರು, ಈ ಕಾರಣಕ್ಕೆ ಟಿಕೆಟ್‌ ಘೋಷಣೆ ತಡೆಹಿಡಿದಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

‘ಬೆಂಗಳೂರು ಉತ್ತರ ಅಥವಾ ಮೈಸೂರು– ಕೊಡಗು ಕ್ಷೇತ್ರದಿಂದ ಎಸ್‌.ಟಿ.ಸೋಮಶೇಖರ್‌, ಉತ್ತರಕನ್ನಡ ಕ್ಷೇತ್ರದಿಂದ ಶಿವರಾಮ ಹೆಬ್ಬಾರ್ ಅವರನ್ನು ಅಚ್ಚರಿಯ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಚರ್ಚೆ ನಡೆದಿರುವುದು ನಿಜ. ಆದರೆ, ಲೋಕಸಭೆ ಚುನಾವಣೆ ಎದುರಿಸಲು ಅವರಿಬ್ಬರೂ ಉತ್ಸುಕತೆ ತೋರಿಸಿಲ್ಲ’ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

ವಿಧಾನಸಭೆಯಿಂದ ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಸ್‌.ಟಿ.ಸೋಮಶೇಖರ್‌ ಅವರು ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿಗೆ ಸಡ್ಡು ಹೊಡೆದಿದ್ದರು. ಮತದಾನಕ್ಕೆ ಗೈರಾಗುವ ಮೂಲಕ ಶಿವರಾಮ ಹೆಬ್ಬಾರ್‌ ಪಕ್ಷದ ವಿಪ್‌ ಉಲ್ಲಂಘಿಸಿದ್ದರು. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಅವರಿಬ್ಬರೂ ಕಾಂಗ್ರೆಸ್‌ ಕಡೆಗೆ ವಾಲಿದ್ದಾರೆ.

‘ಲೋಕಸಭೆ ಚುನಾವಣೆ ಘೋಷಣೆಗೂ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಆ ವಿಧಾನಸಭಾ ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆ ಜೊತಗೇ ಉಪ ಚುನಾವಣೆ ಘೋಷಣೆಯಾಗಬಹುದು. ಅದನ್ನು ತಪ್ಪಿಸಲು ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ  ರಾಜೀನಾಮೆ ನೀಡಲು ಸೋಮಶೇಖರ್‌ ಮತ್ತು ಹೆಬ್ಬಾರ್‌ ನಿರ್ಧರಿಸಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.