ADVERTISEMENT

ಲೋಕಸಭಾ ಚುನಾವಣೆ: ಬೆಂಗಳೂರಿನ ಮೇಲೆ ಮೂವರು ಸಚಿವರ ಕಣ್ಣು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 19:20 IST
Last Updated 9 ಫೆಬ್ರುವರಿ 2024, 19:20 IST
<div class="paragraphs"><p>ಲೋಕಸಭಾ ಚುನಾವಣೆ ( ಸಾಂದರ್ಭಿಕ ಚಿತ್ರ)</p></div>

ಲೋಕಸಭಾ ಚುನಾವಣೆ ( ಸಾಂದರ್ಭಿಕ ಚಿತ್ರ)

   

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ಸಚಿವ ಜೈಶಂಕರ್‌ ಹಾಗೂ ಐಟಿ ಸಚಿವ ರಾಜೀವ್‌ ಚಂದ್ರಶೇಖರ್ ಒಲವು ತೋರಿದ್ದಾರೆ. 

ನಿರ್ಮಲಾ ಸೀತಾರಾಮನ್‌ ಹಾಗೂ ಜೈಶಂಕರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಹಾಗೂ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರು ಕೇಂದ್ರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ನಿರ್ಮಲಾ ಅವರನ್ನು ದಕ್ಷಿಣ ಕನ್ನಡ ಕ್ಷೇತ್ರದಿಂದ ಕಣಕ್ಕಿಳಿಸುವ ಸಂಭವವೂ ಇದೆ ಎಂದು ಮೂಲಗಳು ಹೇಳಿವೆ. ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಹಾಗೂ ಪಿ.ಸಿ.ಮೋಹನ್‌ ಅವರು ಬೆಂಗಳೂರು ಕೇಂದ್ರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಹಲವು ಕೇಂದ್ರ ಸಚಿವರ ರಾಜ್ಯಸಭಾ ಅವಧಿ ಏಪ್ರಿಲ್‌ಗೆ ಕೊನೆಗೊಳ್ಳುತ್ತಿದೆ. ಹೀಗಾಗಿ, ಅವರನ್ನು ಲೋಕಸಭಾ ಚುನಾವಣೆಯ ಹುರಿಯಾಳುಗಳನ್ನಾಗಿ ಮಾಡಲು ಪಕ್ಷದ ವರಿಷ್ಠರು ಯೋಜಿಸಿದ್ದಾರೆ. ತಾವು ಸ್ಪರ್ಧಿಸಲು ಇಚ್ಛಿಸುವ ಮೂರು ಕ್ಷೇತ್ರಗಳ ಹೆಸರನ್ನು ನೀಡುವಂತೆ ವರಿಷ್ಠರು ಈ ಸಚಿವರಿಗೆ ಸೂಚಿಸಿದ್ದಾರೆ. 

ಪಕ್ಷವು ರಾಜಸ್ಥಾನದಿಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಹರಿಯಾಣದಿಂದ ಅರಣ್ಯ ಹಾಗೂ ಕಾರ್ಮಿಕ ಸಚಿವ ಭೂಪೇಂದರ್ ಯಾದವ್, ಕೇರಳದಿಂದ ವಿ. ಮುರಳೀಧರನ್ ಮತ್ತು ಒಡಿಶಾದಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕೂಡ ಕಣಕ್ಕಿಳಿಸಬಹುದು ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಹೊಸ ಮುಖಗಳನ್ನು ಕಣಕ್ಕೆ ಇಳಿಸಿ ಬಿಜೆಪಿ ಯಶಸ್ಸು ಗಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ಈ ತಂತ್ರವನ್ನು ಅನುಸರಿಸುವ ಸಾಧ್ಯತೆ ಇದೆ. 543 ಸ್ಥಾನಗಳ ಪೈಕಿ ಶೇ 30ರಷ್ಟು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ತಿಳಿಸಿದರು. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕೇಂದ್ರ ಸಚಿವರನ್ನು ಹುರಿಯಾಳುಗಳನ್ನಾಗಿ ಮಾಡಿ ಬಿಜೆಪಿ ಭಾರಿ ಯಶಸ್ಸು ಗಳಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.