ADVERTISEMENT

ಲೋಕಾಯುಕ್ತ ದಾಳಿ: ಅಬಕಾರಿ ಸಚಿವರ ರಾಜೀನಾಮೆಗೆ ಬಿ.ವೈ. ವಿಜಯೇಂದ್ರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 14:25 IST
Last Updated 18 ಜನವರಿ 2026, 14:25 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ ಅಬಕಾರಿ ಇಲಾಖೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಂಬಂಧಿಸಿದ ಸಚಿವರ ರಾಜೀನಾಮೆ ಪಡೆಯಬೇಕು. ಇಲ್ಲವೇ ಅವರೇ ಇದರ ನೈತಿಕ ಹೊಣೆ ಹೊರಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.

ಇಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಲಾಖೆಯ ಒಬ್ಬ ಹಿರಿಯ ಅಧಿಕಾರಿ ಖುದ್ದು ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದು, ₹ 25 ಲಕ್ಷ ನಗದು ದೊರೆತಿದೆ. ಕೋಟ್ಯಂತರ ರೂಪಾಯಿ ಮೊತ್ತದ ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಆಡಿಯೊ ಸಾಕ್ಷ್ಯ ಲಭ್ಯವಾಗಿದೆ. ಸಚಿವರ ಮೇಲೆ ನೇರ ಆಪಾದನೆ ಬಂದಿದೆ’ ಎಂದರು.

ADVERTISEMENT

‘ಮನರೇಗಾ ಬಗ್ಗೆ ಚರ್ಚಿಸುವುದೇ ಆಗಿದ್ದರೆ ಮುಂದಿನ ತಿಂಗಳು ನಡೆಯಲಿರುವ ಬಜೆಟ್‌ ಅಧಿವೇಶನದಲ್ಲಿ ಮಾಡಬಹುದಿತ್ತು. ವಿಶೇಷ ಅಧಿವೇಶನ ಕರೆದಿರುವುದು ಸಿದ್ದರಾಮಯ್ಯ ಅವರ ಚಾಣಾಕ್ಷ ನಡೆ. ಡಿ.ಕೆ. ಶಿವಕುಮಾರ್‌ ಅವರನ್ನು ದಾವೋಸ್‌ಗೆ ಕಳುಹಿಸಿ ತಾವು ರಾಜಕೀಯ ಚದುರಂಗ ಆಟ ಆಡಲು ಹೊರಟಿದ್ದರು. ಇದು ಗೊತ್ತಾಗಿಯೇ ಶಿವಕುಮಾರ್ ತಮ್ಮ ಪ್ರವಾಸ ರದ್ದುಮಾಡಿಕೊಂಡರು. ಈ ಸದನದ ಗೌರವ ಹಾಳು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ದಾವೋಸ್‌ ಹೂಡಿಕೆ ಸಮಾವೇಶಕ್ಕೆ ಮುಖ್ಯಮಂತ್ರಿ– ಉಪಮುಖ್ಯಮಂತ್ರಿ ಯಾರೂ ಹೋಗಿಲ್ಲ. ರಾಜ್ಯದ ಹಿತದೃಷ್ಟಿ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಇದು ರಾಜ್ಯಕ್ಕೆ ಮಾಡುವ ಅಪಮಾನ’ ಎಂದು ದೂರಿದರು.

ಕಾಂಗ್ರೆಸ್‌ನಿಂದ ಗೂಂಡಾಗಿರಿ: ‘ಮುಖ್ಯಮಂತ್ರಿ ತವರು ಕ್ಷೇತ್ರ ವರುಣದಲ್ಲಿ ಕಾಂಗ್ರೆಸ್ ಗೂಂಡಾಗಳು ಮಹಿಳಾ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡಿರುವುದು ಮೊದಲೇನಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಕೈಎತ್ತಿದ್ದರು. ಜಿಲ್ಲಾಧಿಕಾರಿಗೆ ವೇದಿಕೆಯಲ್ಲೇ ಅಪಮಾನ ಮಾಡಿದ್ದರು. ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ಮೇಲೆ ಕಾಂಗ್ರೆಸ್ ಮುಖಂಡ ದುಂಡಾವರ್ತನೆ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಲ್ಲಿ ಈ ಸರ್ಕಾರ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಇದೇ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸಂಸ್ಕೃತಿ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.