ADVERTISEMENT

ತಾಲ್ಲೂಕು ಪಂಚಾಯಿತಿಗಳಿಗೆ ನೋಟಿಸ್‌: ಪಿಡಿಒಗಳ ಮೇಲೆ ಮತ್ತೆ ಲೋಕಾಯುಕ್ತ ತೂಗುಗತ್ತಿ

ತಾಲ್ಲೂಕು ಪಂಚಾಯಿತಿಗಳಿಗೆ ನೋಟಿಸ್‌

ಇ.ಎಸ್.ಸುಧೀಂದ್ರ ಪ್ರಸಾದ್
Published 4 ಏಪ್ರಿಲ್ 2021, 20:12 IST
Last Updated 4 ಏಪ್ರಿಲ್ 2021, 20:12 IST
ಲೋಕಾಯುಕ್ತ
ಲೋಕಾಯುಕ್ತ    

ಧಾರವಾಡ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 2007ರಿಂದ 2013ರವರೆಗೆ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಲೋಕಾಯುಕ್ತ ಪೊಲೀಸ್ ಮೂರನೇ ಬಾರಿ ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯಿತಿಗಳಿಗೆ ನೋಟಿಸ್ ಜಾರಿ ಮಾಡಿದೆ.

2013ರಲ್ಲಿ ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳಲ್ಲಿ ಲೆಕ್ಕ ಪರಿಶೋಧನೆ ನಡೆಸಿದ ಮಹಾ ಲೇಖಪಾಲ(ಸಿಎಜಿ), ಇಲಾಖೆಯಲ್ಲಿ ಬಹಳಷ್ಟು ಅವ್ಯವಹಾರ ಮತ್ತು ಹಣ ದುರುಪಯೋಗ ನಡೆದಿರುವ ಕುರಿತು ತನ್ನ ವರದಿಯಲ್ಲಿ ಹೇಳಿತ್ತು.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಹೆಸರಿನಲ್ಲಿ ಹಣ ತೆಗೆದಿರುವ, ನರೇಗಾ ಹಣ ದುರುಪಯೋಗ ಮಾಡಿಕೊಂಡಿರುವ, ಯಂತ್ರಗಳನ್ನು ಉಪಯೋಗಿಸಿ ನಡೆಸಿದ ಕಾಮಗಾರಿಗಳಿಗೆ ಉದ್ಯೋಗ ಖಾತ್ರಿ ಮೂಲಕ ಬಿಲ್ ಪಾವತಿಸಿರುವ ಹಾಗೂ 60:40ರ ಅನುಪಾತದಲ್ಲಿ ಕಾಮಗಾರಿ ನಡೆಸದಿರುವ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ADVERTISEMENT

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಸರ್ಕಾರ, 2014ರಲ್ಲಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿತ್ತು. ಇಡೀ ರಾಜ್ಯದಲ್ಲಿ ಇಂಥ ಪ್ರಕರಣಗಳು ನಡೆದಿರುವ ಸಾಧ್ಯತೆ ಇದ್ದು, ಸಮಗ್ರ ತನಿಖೆ ಕೈಗೊಳ್ಳುವಂತೆ ಸೂಚಿಸಿತ್ತು. ಕೂಡಲೇ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದ ಲೋಕಾಯುಕ್ತ ಪೊಲೀಸ್, ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಂದ ಮಾಹಿತಿ ಸಂಗ್ರಹಿಸಿ ನೀಡುವಂತೆ ಸೂಚಿಸಿತ್ತು.

ಆದರೆ ನಂತರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. 2020ರ ಡಿಸೆಂಬರ್‌ನಲ್ಲಿ ಲೋಕಾಯುಕ್ತ ಹೆಚ್ಚುವರಿ ಮಹಾನಿರ್ದೇಶಕರ ಸೂಚನೆ ಮೇರೆಗೆ ಮತ್ತೆ ನೋಟಿಸ್ ಜಾರಿ ಮಾಡಲಾಗಿತ್ತು. ಆಗಲೂ ಈ ಕುರಿತಂತೆ ಯಾವುದೇ ವರದಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸಿರಲಿಲ್ಲ. ಇದೀಗ ಮೂರನೇ ನೋಟಿಸ್‌ ಅನ್ನು ಲೋಕಾಯುಕ್ತ ಪೊಲೀಸರು ಜಾರಿ ಮಾಡಿದ್ದಾರೆ. ಮುಂದಿನ ಆಗುಹೋಗುಗಳಿಗೆ ಪಿಡಿಒಗಳೇ ಜವಾಬ್ದಾರರು ಎಂದು ಎಚ್ಚರಿಸಿದ್ದಾರೆ.

2007ರಿಂದ ನರೇಗಾ ಯೋಜನೆಯಡಿ ಕೈಗೊಂಡ ಸಂಪೂರ್ಣ ಕಾಮಗಾರಿಗಳ ದಾಖಲಾತಿ ಸಲ್ಲಿಸಬೇಕು. ಯಾವುದೇ ವರ್ಷದ ದಾಖಲಾತಿ ಲಭ್ಯವಿಲ್ಲದಿದ್ದರೆ ಅದಕ್ಕೆ ಸೂಕ್ತ ಕಾರಣಗಳೊಂದಿಗೆ ಮಾಹಿತಿ ನೀಡಬೇಕು. ಈ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಕಾರ್ಯದರ್ಶಿ, ಪಿಡಿಒಗಳ ಹೆಸರು, ಮೊಬೈಲ್ ಸಂಖ್ಯೆ, ಸದ್ಯ ಇರುವ ವಿವರ, ನಿವೃತ್ತರಾಗಿದ್ದರೆ ಮನೆ ವಿಳಾಸವನ್ನು ನೀಡಬೇಕು. ಕಾಮಗಾರಿ ಉದ್ಘಾಟನೆ ಮಾಡುವ ಕಾಲಕ್ಕೆ ತೆಗೆದ ಚಿತ್ರಗಳ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಕೆಲ ತಿಂಗಳ ಹಿಂದೆ ನಡೆದ ಪಿಡಿಒಗಳ ಸಮಾವೇಶದಲ್ಲಿ, ಲೋಕಾಯುಕ್ತ ಪ್ರಕರಣವನ್ನು ರದ್ದುಪಡಿಸಲು ಸರ್ಕಾರ ಆದೇಶಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಪಿಡಿಒ ಸಂಘಟನೆಯ ವತಿಯಿಂದ ಮನವಿಯನ್ನು ಸಲ್ಲಿಸಲಾಗಿತ್ತು. ಇದಾದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.