ADVERTISEMENT

ಲಂಚ ಪ್ರಕರಣ | ಇನ್ನೂ ಮುಗಿಯದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆ

ಬುಧವಾರವೂ ತನಿಖಾ ತಂಡದ ಎದುರು ಹಾಜರಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 22:39 IST
Last Updated 14 ಮಾರ್ಚ್ 2023, 22:39 IST
ಮಾಡಾಳ್ ವಿರೂಪಾಕ್ಷಪ್ಪ
ಮಾಡಾಳ್ ವಿರೂಪಾಕ್ಷಪ್ಪ    

ಬೆಂಗಳೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರ ವಿಚಾರಣೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಬುಧವಾರವೂ ತನಿಖಾ ತಂಡದ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ಕಾರ್ಯಾದೇಶ ನೀಡಲು ಮಗನ ಮೂಲಕ ₹ 40 ಲಕ್ಷ ಲಂಚ ಪಡೆದ ಆರೋಪ ಹಾಗೂ ಮನೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾದ ಪ್ರಕರಣಗಲ್ಲಿ ಲೋಕಾಯುಕ್ತ ಪೊಲೀಸರು ಶಾಸಕರ ವಿಚಾರಣೆ ನಡೆಸುತ್ತಿದ್ದಾರೆ. ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ಗುರುವಾರ ತನಿಖಾ ತಂಡದ ಎದುರು ಹಾಜರಾಗಿದ್ದರು. ಸೋಮವಾರ ನಾಲ್ಕನೇ ದಿನ ವಿಚಾರಣೆ ಎದುರಿಸಿದರು.

‘ವಿರೂಪಾಕ್ಷಪ್ಪ ಆರಂಭದಲ್ಲಿ ತನಿಖಾ ತಂಡಕ್ಕೆ ಸಹಕಾರ ನೀಡಿರಲಿಲ್ಲ. ನಂತರದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಹೀಗಾಗಿ ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ತನಿಖಾ ಅವಧಿಯಲ್ಲಿ ಲಭ್ಯವಾಗಿರುವ ಮಾಹಿತಿ ಹಾಗೂ ದಾಖಲೆಗಳ ಆಧಾರದಲ್ಲಿ ವಿಚಾರಣೆ ಮುಂದುವರಿಯಲಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಖಾಮುಖಿ ವಿಚಾರಣೆಗೆ ಸಿದ್ಧತೆ: ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿಯೂ ಆಗಿರುವ ಶಾಸಕರ ಮಗ ಪ್ರಶಾಂತ್‌ ಮಾಡಾಳ್‌ ಮತ್ತು ಅವರ ಖಾಸಗಿ ಕಚೇರಿಯ ಅಕೌಂಟೆಂಟ್‌ ಸುರೇಂದ್ರ ಅವರ ವಿಚಾರಣೆಯೂ ನಡೆಯುತ್ತಿದೆ. ಅವರನ್ನು ಪುನಃ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮುನ್ನ ಶಾಸಕರನ್ನೂ ಮುಖಾಮುಖಿಯಾಗಿಸಿ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಬುಧವಾರವೇ ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಎಸ್‌ಡಿಎಲ್‌ನ ಕೆಲವು ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗಿದೆ. ಕಚ್ಚಾವಸ್ತು ಖರೀದಿ ವಿಭಾಗ, ಟೆಂಡರ್‌ ಪರಿಶೀಲನಾ ಸಮಿತಿ ಸದಸ್ಯರು, ಹಣಕಾಸು ವಿಭಾಗದ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದೆ. ಬುಧವಾರವೂ ಕೆಲವು ಅಧಿಕಾರಿಗಳ ವಿಚಾರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.