ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಹೆಚ್ಚುವರಿ ಹುದ್ದೆ ಮಂಜೂರಾತಿ, ಭತ್ಯೆ ಹೆಚ್ಚಳ ಕೋರಿ ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಹಲವು ಪ್ರಸ್ತಾವಗಳು ಆರ್ಥಿಕ ಇಲಾಖೆ ಬಳಿ ಬಾಕಿ ಉಳಿದಿವೆ. ಇದರಿಂದ ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಗೆ ತೊಡಕಾಗಿದೆ.
ಈ ಪೈಕಿ ಕೆಲವು ಪ್ರಸ್ತಾವಗಳನ್ನು 2018–19ರಲ್ಲಿಯೇ ಸಲ್ಲಿಸಲಾಗಿತ್ತು. ಲೋಕಾಯುಕ್ತ ಸಂಸ್ಥೆ ಮತ್ತು ಆರ್ಥಿಕ ಇಲಾಖೆ ಮಧ್ಯೆ ಹಲವು ಬಾರಿ ಪತ್ರ ವ್ಯವಹಾರಗಳು ನಡೆದಿವೆ. ಆದರೆ ಪ್ರಸ್ತಾವಗಳಿಗೆ ಈವರೆಗೂ ಅನುಮೋದನೆ ಸಿಕ್ಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ಲೋಕಾಯುಕ್ತವು ಆರ್ಥಿಕ ಇಲಾಖೆಗೆ ಪತ್ರ ಬರೆದಿದೆ.
ಲೋಕಾಯುಕ್ತ ಸಂಸ್ಥೆಯು 339 ಹೆಚ್ಚುವರಿ ಹುದ್ದೆಗಳನ್ನು ಕೋರಿ 2024ರಲ್ಲಿ ಪ್ರಸ್ತಾವ ಸಲ್ಲಿಸಿರುತ್ತದೆ. ಆರ್ಥಿಕ ಇಲಾಖೆಯು ಹೆಚ್ಚಿನ ಮಾಹಿತಿ ಅಗತ್ಯವಿದೆ ಎಂದು ತಿಳಿಸಿರುತ್ತದೆ. ಯಾವ ಮಾಹಿತಿ ಬೇಕು ಎಂಬ ವಿವರವನ್ನು ನೀಡಿ ಎಂದು ಆರ್ಥಿಕ ಇಲಾಖೆಗೆ ಲೋಕಾಯುಕ್ತವು ಅಕ್ಟೋಬರ್ 10ರಂದು ಪತ್ರ ಬರೆದಿದೆ. ಆ ಪತ್ರಕ್ಕೆ ಈವರೆಗೆ ಪ್ರತಿಕ್ರಿಯೆ ಬಂದಿರುವುದಿಲ್ಲ.
ಲೋಕಾಯುಕ್ತದಲ್ಲಿ ಗ್ರೂಪ್–ಸಿ ವೃಂದದಲ್ಲಿನ ಉಳಿಕೆ ಮೂಲ ವೃಂದದ 64 ಮತ್ತು ಕಲ್ಯಾಣ ಕರ್ನಾಟಕ ವೃಂದದ 4 ಹುದ್ದೆಗಳು ನೇಮಕಾತಿಗೆ ಬಾಕಿ ಇರುತ್ತವೆ. ಆರ್ಥಿಕ ಮಿತವ್ಯಯ ಸಡಿಲಿಸಿ, ಈ ಹುದ್ದೆಗಳ ನೇರ ನೇಮಕಾತಿಗೆ ಅನುಮತಿ ನೀಡಿ ಎಂದು ಪ್ರಸ್ತಾವ ಸಲ್ಲಿಸಿ ಹಲವು ತಿಂಗಳು ಕಳೆದಿವೆ. ಆರ್ಥಿಕ ಇಲಾಖೆಯು ಈವರೆಗೆ ಅನುಮತಿ ನೀಡಿಲ್ಲ.
‘ಲೋಕಾಯುಕ್ತ ಸಂಸ್ಥೆಯು ಸಾವಿರಾರು ಪ್ರಕರಣಗಳನ್ನು ನಿರ್ವಹಿಸುತ್ತಿದೆ. ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಣೆ ಕಷ್ಟವಾಗಿದೆ. ಸಿಬ್ಬಂದಿಯೇ ಇಲ್ಲದೆ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಹೇಗೆ’ ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.