ADVERTISEMENT

ದಕ್ಷಿಣದ ಹೆಬ್ಬಾಗಿಲಿಗೆ ಮೋದಿ?

ತುಮಕೂರಿನಲ್ಲಿ ದೇವೇಗೌಡ ನಾಮಪತ್ರ ಇಂದು: ಬೆಂಗಳೂರು ದಕ್ಷಿಣದಲ್ಲಿ ಬಿ.ಕೆ. ಹರಿ‍‍ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 4:23 IST
Last Updated 25 ಮಾರ್ಚ್ 2019, 4:23 IST
   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿದ್ದಾರೆ ಎಂಬ ವಿಷಯದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

ಈ ಕ್ಷೇತ್ರದಿಂದ ತೇಜಸ್ವಿನಿ ಅನಂತ್‌ಕುಮಾರ್ ಹೆಸರು ಅಖೈರಾಗಿದೆ ಎಂದು ಪಕ್ಷದ ಮೂಲಗಳು ಹೇಳಿದ್ದವು. ಅವರು ಪ್ರಚಾರವನ್ನೂ ಆರಂಭಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಉಳಿದಿದ್ದು, ಅಭ್ಯರ್ಥಿ ಹೆಸರು ಘೋಷಣೆಯಾಗದೇ ಇರುವುದು ವಿಭಿನ್ನ ಆಯಾಮಗಳನ್ನು ಪಡೆದುಕೊಂಡಿದೆ.

ಮೋದಿ ಸ್ಪರ್ಧೆಗಾಗಿ ‘ನೀವ್ ಬಂದ್ರೆ 28ಕ್ಕೆ 28’ ಎಂಬ ಹ್ಯಾಷ್‌ಟಾಗ್‌ನಡಿ ಟ್ವಿಟರ್‌ನಲ್ಲಿ ಅವರ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ. ಮೋದಿ ಕರ್ನಾಟಕಕ್ಕೆ ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಬಿಜೆಪಿ ನಾಯಕರು ಖಚಿತವಾಗಿ ಏನನ್ನೂ ಹೇಳುತ್ತಿಲ್ಲ. ‘ಈ ಕ್ಷೇತ್ರದ ಆಯ್ಕೆಯನ್ನು ಬಹಳ ರಹಸ್ಯವಾಗಿ ಇಡಲಾಗಿದೆ; ಯಾರು ಅಭ್ಯರ್ಥಿ ಎಂಬುದು ನಮಗೂ ಗೊತ್ತಿಲ್ಲ’ ಎಂದು ಹೇಳುವ ಅನೇಕ ನಾಯಕರು, ಮೋದಿ ಸ್ಪರ್ಧೆಯನ್ನು ನಿರಾಕರಿಸುತ್ತಿಲ್ಲ.

ADVERTISEMENT

‘ತೇಜಸ್ವಿನಿ ಸ್ಪರ್ಧೆಗೆ ಬಿಜೆಪಿಯ ಕೆಲವು ಹಿರಿಯ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಹೆಸರು ಪ್ರಕಟಿಸಿಲ್ಲ. ಅವರ ಬದಲು ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಹೆಸರು ಮುನ್ನೆಲೆಗೆ ಬಂದಿದೆ’ ಎಂದೂ ಮೂಲಗಳು ಹೇಳಿವೆ.

‘ಪಕ್ಷದ ರಾಷ್ಟ್ರೀಯ ನಾಯಕರಾಗಿದ್ದ ಅನಂತ್ ಕುಮಾರ್ ತೀರಿಕೊಂಡು ನಾಲ್ಕು ತಿಂಗಳು ಕಳೆದಿದೆ. ಅವರ ಪತ್ನಿಗೆ ಟಿಕೆಟ್‌ ಕೊಡದೇ ಬೇರೆಯವರಿಗೆ ಕೊಟ್ಟರೆ ಕೆಲಸ ಮಾಡುವುದಾದರೂ ಹೇಗೆ’ ಎಂದು ಈ ಕ್ಷೇತ್ರದ ಹಿರಿಯ ಶಾಸಕರು ತಮ್ಮ ಅತೃಪ್ತಿ ಹೊರಹಾಕಿದ್ದಾರೆ.

ಹರಿಪ್ರಸಾದ್‌ ಕಣಕ್ಕೆ: 1999ರಲ್ಲಿ 65 ಸಾವಿರ ಮತಗಳಿಂದ ಅನಂತ್‌ ಕುಮಾರ್ ಎದುರು ಸೋತಿದ್ದ, ಈಗಿನ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ದಕ್ಷಿಣದಿಂದ ಕಾಂಗ್ರೆಸ್‌ ಮತ್ತೊಮ್ಮೆ ಟಿಕೆಟ್‌ ನೀಡಿದೆ.

‘ಮೋದಿ ಸ್ಪರ್ಧಿಸಬಹುದು ಎಂಬ ಅಂದಾಜಿನಲ್ಲಿ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಅವರು ಬರದೇ ಇದ್ದರೆ ತೇಜಸ್ವಿಸೂರ್ಯಗೆ ಟಿಕೆಟ್‌ ಕೊಡುವುದು ಖಚಿತವಾಗಿದ್ದರಿಂದಾಗಿ ಹರಿಪ್ರಸಾದ್‌ಗೆ ಟಿಕೆಟ್‌ ಕೊಡಲಾಗಿದೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಗೌಡರ ನಾಮಪತ್ರ ಇಂದು: ದೇವೇಗೌಡರು ತುಮಕೂರಿನಲ್ಲಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಬಿ ಫಾರಂ ಸಿಗದೇ ಇದ್ದರೆ ಪಕ್ಷೇತರರಾಗಿ ಅವರು ಸ್ಪರ್ಧೆಯಲ್ಲಿ ಉಳಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸೂಕ್ತ ಅಭ್ಯರ್ಥಿ ಸಿಗದೇ ಇರುವುದರಿಂದ ತನ್ನ ಪಾಲಿಗೆ ಬಂದಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಬಗ್ಗೆ ಜೆಡಿಎಸ್‌ನಲ್ಲಿಚರ್ಚೆ ನಡೆದಿದೆ. ಇಲ್ಲಿ ಪ್ರೊ.ರಾಜೀವಗೌಡ, ಪರಿಷತ್ತಿನ ಸದಸ್ಯ ನಾರಾಯಣಸ್ವಾಮಿ, ಬಿ.ಎಲ್‌. ಶಂಕರ್‌ ಹೆಸರು ಚಲಾವಣೆಯಲ್ಲಿವೆ.

ಎರಡನೇ ಹಂತ ಮೀನಮೇಷ: ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಿಗೆ ಬಿಜೆಪಿ, 1 ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯಾಗಿಲ್ಲ.

ಕೊಪ್ಪಳದಲ್ಲಿ ಕರಡಿ ಸಂಗಣ್ಣಗೆ ಟಿಕೆಟ್‌ ನೀಡುತ್ತಾರೋ ಇಲ್ಲವೋ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆದಿದೆ.

ರಾಯಚೂರು, ಚಿಕ್ಕೋಡಿ ಕ್ಷೇತ್ರಗಳ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಚಿಕ್ಕೋಡಿಯಿಂದ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಬರವಿಗಾಗಿ ಕಾಯಲಾಗುತ್ತಿದೆ. ಅವರು ಬರದೇ ಇದ್ದರೆ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಟಿಕೆಟ್ ನೀಡುವುದು ಖಚಿತ ಎನ್ನಲಾಗಿದೆ.

ತನ್ನ ಪಾಲಿನ 20ರ ಪೈಕಿ 19 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಖೈರುಗೊಳಿಸಿದೆ.

ಧಾರವಾಡದಲ್ಲಿ ಮಾಜಿ ಸಂಸದ ಐ.ಜಿ. ಸನದಿ ಪುತ್ರ ಶಾಕಿರ್ ಹಾಗೂ ಯುವ ಮುಖಂಡ ಸದಾನಂದ ಡಂಗಣವರ ಮಧ್ಯೆ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನೂ ನಿಗೂಢವಾಗಿದೆ.

‘ದೋಸ್ತಿ’ ನಡೆಗೆ ಗೌಡರ ಕಿಡಿ

ನಾಲ್ಕೈದು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಅಸಹಕಾರ ನೀಡುತ್ತಿರುವ ಬಗ್ಗೆ ಎಚ್‌.ಡಿ. ದೇವೇಗೌಡ ಸಿಟ್ಟಾಗಿದ್ದಾರೆ.

ತುಮಕೂರಿನಲ್ಲಿ ಸಂಸದ ಮುದ್ದ ಹನುಮೇಗೌಡ, ಹಾಸನ, ಮಂಡ್ಯಗಳಲ್ಲಿ ಸ್ಥಳೀಯ ನಾಯಕರು ಮೈತ್ರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಇದರ ಶಮನಕ್ಕೆ ರಾಜ್ಯ ನಾಯಕರು ಗಂಭೀರ ಪ್ರಯತ್ನ ಹಾಕಿಲ್ಲ ಎಂಬುದು ಗೌಡರ ಕೋಪಕ್ಕೆ ಕಾರಣ.

‘ನೀವ್‌ ಬಂದ್ರೆ 28ಕ್ಕೆ 28’

‘ನೀವ್‌ (ಮೋದಿ) ಬಂದ್ರೆ 28 ಕ್ಕೆ 28 ಲೋಕಸಭಾ ಕ್ಷೇತ್ರಗಳು ಬುಟ್ಟಿಗೆ ಬೀಳುತ್ತವೆ’ ಎಂಬ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ನಡೆದಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. #ನೀವು ಬಂದ್ರೆ 28 ಕ್ಕೆ 28 ಎಂಬ ಹ್ಯಾಷ್‌ ಟ್ಯಾಗ್‌ ಸೃಜಿಸಲಾಗಿದೆ.

‘ನೀವು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಗಬೇಕು ಎಂಬುದು ನಮ್ಮ ಬಯಕೆ. ಅದು ಸಾಧ್ಯವಾದರೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳೂ ನಿಮ್ಮ ಮಡಿಲಿಗೆ ಹಾಕುತ್ತೇವೆ’ ಎಂಬುದಾಗಿ ಅನೇಕರು ಹೇಳಿಕೊಂಡಿದ್ದಾರೆ. ಇದಕ್ಕೆ ಸುಮಾರು 30 ಸಾವಿರ ಜನ ಪ್ರತಿಕ್ರಿಯಿಸಿದ್ದಾರೆ.

*ಪರಮೇಶ್ವರ ಅವರಷ್ಟೇ ಅಲ್ಲ. ಟಿ.ಬಿ.ಜಯಚಂದ್ರ, ಜೆಡಿಎಸ್ ಮುಖಂಡರು ಮನೆಗೆ ಬಂದು ತುಮಕೂರಿನಿಂದ ಸ್ಪರ್ಧಿಸಲೇಬೇಕು ಎಂದು ಒತ್ತಾಯಿಸಿದ್ದಾರೆ

– ಎಚ್‌.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.