ADVERTISEMENT

ಕೋವಿಡ್‌ನಿಂದ ನಷ್ಟ: ಕಲಾಕೃತಿ ಕದ್ದ ಜವಳಿ ವ್ಯಾಪಾರಿ

ಆನ್‌ಲೈನ್‌ನಲ್ಲಿ ಹರಾಜು ಹಾಕಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 20:15 IST
Last Updated 23 ನವೆಂಬರ್ 2021, 20:15 IST
ಪೊಲೀಸರು ವಶಪಡಿಸಿಕೊಂಡ ಅಮೂಲ್ಯ ಕಲಾಕೃತಿಗಳು
ಪೊಲೀಸರು ವಶಪಡಿಸಿಕೊಂಡ ಅಮೂಲ್ಯ ಕಲಾಕೃತಿಗಳು   

ಮೈಸೂರು: ಕೋವಿಡ್‌ ಪರಿಸ್ಥಿತಿಯಿಂದಾಗಿ ನಷ್ಟಕ್ಕೀಡಾಗಿದ್ದ ಜವಳಿ ವ್ಯಾಪಾರಿಯೊಬ್ಬ ಸ್ನೇಹಿತನೊಂದಿಗೆ ಸೇರಿಕೆ.ಆರ್.ನಗರ ತಾಲ್ಲೂಕಿನ ಚಂದಗಾಲು ಗ್ರಾಮದ ಶ್ರೀರಾಮಮಂದಿರ ಹಾಗೂ ಸಮೀಪದ ಗ್ರಂಥಾಲಯದಲ್ಲಿ ಅಮೂಲ್ಯ ಕಲಾಕೃತಿಗಳನ್ನು ಕಳವು ಮಾಡಿ ಆನ್‌ಲೈನ್‌ನಲ್ಲಿ ಹರಾಜಿಗಿಟ್ಟದ್ದ, ಇಬ್ಬರನ್ನೂಪೊಲೀಸರು ಬಂಧಿಸಿದ್ದಾರೆ. 10 ಕಲಾಕೃತಿಗಳನ್ನು ವಶಪಡಿಸಿಕೊಂಡಿದ್ದಾರೆ.

ದೇಗುಲ ಮತ್ತು ಗ್ರಂಥಾಲಯದ ಸಿಬ್ಬಂದಿಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ನಗರದಲ್ಲಿ ಮಂಗಳವಾರ ಕಲಾಕೃತಿಗಳನ್ನು ಹಸ್ತಾಂತರಿಸಿದರು.

‘ಆರೋಪಿಯು ಅಂಗಡಿ ಬಾಡಿಗೆಯನ್ನೂ ಪಾವತಿಸಲಾಗದೇ ಪರದಾಡುತ್ತಿದ್ದ. ಹೀಗಾಗಿ ಕಲಾಕೃತಿಗಳನ್ನು ಕಳವು ಮಾಡಿ ಮಾರಾಟಕ್ಕೆ ಮುಂದಾಗಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆರೋಪಿಯು ವೆಬ್‌ಸೈಟ್‌ವೊಂದರಲ್ಲಿ ಕಲಾಕೃತಿಗಳನ್ನು ಹರಾಜಿಗೆ ಇಟ್ಟಿದ್ದ. ಹಳೆಯ ಮನೆ ಕೆಡವುವಾಗ ಸಿಕ್ಕಿದವು ಎಂದು ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದ. ₹ 4.50 ಲಕ್ಷದವರೆಗೂ ಹರಾಜು ಕೂಗಲಾಗಿದೆ ಎಂಬ ಮಾಹಿತಿ ತಿಳಿದ ಬಳಿಕ ಖರೀದಿದಾರರಂತೆಯೇ ಫೇಸ್‌ಬುಕ್‌ ಮೂಲಕವೇ ಸಂಪರ್ಕಿಸಿ, ಬಂಧಿಸಲಾಯಿತು. ವಿಷ್ಣುವಿನ ದಶಾವತಾರಗಳ ಚಿತ್ರಗಳಿದ್ದ ಈ ಕಲಾಕೃತಿಗಳ ರೇಖೆಗಳ ಮೇಲೆ ಚಿನ್ನದ ಲೇಪನವಿದೆ’ ಎಂದು ತಿಳಿಸಿದರು.

‘ನೂರು ವರ್ಷಕ್ಕೂ ಹಿಂದೆ ಮಹಾರಾಜರು ಕಾಣಿಕೆಯಾಗಿ ಈ ಕೃತಿಗಳನ್ನು ಅರ್ಪಿಸಿದ್ದರು’ ಎಂದು ದೇಗುಲದ ಸಿಬ್ಬಂದಿಯೊಬ್ಬರು ತಿಳಿಸಿದರು. ಆರೋಪಿಗಳ ಹೆಸರು ಮತ್ತು ಇತರೆ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.