ಮಂಡ್ಯ: ಬಾಲಕಿಯನ್ನು ಪ್ರೀತಿಸುತ್ತಿದ್ದ ಎಂಬ ಆರೋಪದ ಮೇಲೆ ಆಕೆಯ ಕುಟುಂಬ ಸದಸ್ಯರು ಬುಧವಾರ ರಾತ್ರಿ ಬಾಲಕನೊಬ್ಬನ್ನು ಮನೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾನೆ.
ಕಲ್ಲಹಳ್ಳಿ ಬಡಾವಣೆ 2ನೇ ಕ್ರಾಸ್ ನಿವಾಸಿ ಸತೀಶ್ ಅವರ ಮಗ ದರ್ಶನ್ (16) ಮೃತಪಟ್ಟ ಬಾಲಕ. ಘಟನೆ ಸಂಬಂಧ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಸೇರಿ 17 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಸ್ಸೆಸ್ಸೆಲ್ಸಿ ಅನುತ್ತೀರ್ಣನಾಗಿದ್ದ ಬಾಲಕ, ತಂದೆಯ ಜೊತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಶಾಲೆಯಲ್ಲಿ ಪರಿಚಿತಳಾಗಿದ್ದ ಬಾಲಕಿಯನ್ನು ಪ್ರೀತಿಸುತ್ತಿದ್ದ ಆತ ಆಕೆಯೊಂದಿಗೆ ಇರುವ ಚಿತ್ರಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಹಾಕಿಕೊಂಡಿದ್ದ.
ಇದರಿಂದ ಕೋಪಗೊಂಡಿದ್ದ ಬಾಲಕಿಯ ಕುಟುಂಬ ಸದಸ್ಯರು ಮಂಗಳವಾರ ರಾತ್ರಿ ಬಾಲಕಿಯಿಂದಲೇ ಕರೆ ಮಾಡಿಸಿ ಬಾಲಕನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಆತನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ನಸುಕಿನ 3.30ರ ವೇಳೆಗೆ ಬಾಲಕನ ತಂದೆ ಮಗನನ್ನು ಹುಡುಕಿಕೊಂಡು ತೆರಳಿದ್ದಾರೆ. ರಕ್ತಸಿಕ್ತನಾಗಿದ್ದ ಬಾಲಕನನ್ನು ಬುಧವಾರ ನಸುಕಿನಲ್ಲಿ ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಂತರ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲು ಮಾಡಲಾಗಿದೆ. ಅಲ್ಲಿ ವೆಂಟಿಲೇಟರ್ ಸಿಗದ ಪರಿಣಾಮ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಸ್ಪಂದಿಸದ ಬಾಲಕ ಮೃತಪಟ್ಟಿದ್ದಾನೆ.
‘ನಾನು ಶಿವಲಿಂಗು ಅವರ ಮನೆಗೆ ತೆರಳಿದಾಗ ನನ್ನ ಮಗನ ಮೈಯಲ್ಲಿ ರಕ್ತ ಸುರಿಯುತ್ತಿತ್ತು. ಮಗ ತಪ್ಪು ಮಾಡಿದ್ದಾನೆ, ಅವನಿಗೆ ಬುದ್ಧಿ ಕಲಿಸುತ್ತೇನೆ ಎಂದು ಶಿವಲಿಂಗು ಅವರ ಕಾಲಿಗೆ ಬಿದ್ದು ಕೇಳಿಕೊಂಡೆ. ಆದರೂ ಬಿಡದೆ ಸಿಕ್ಕಸಿಕ್ಕ ವಸ್ತುಗಳಲ್ಲಿ ಹೊಡೆದರು. ನನ್ನ ಕಣ್ಣ ಮುಂದೆಯೇ ಪ್ರಜ್ಞೆ ತಪ್ಪಿದ ಮಗ ಮತ್ತೆ ಏಳಲೇ ಇಲ್ಲ’ ಎಂದು ಬಾಲಕನ ತಂದೆ ಸತೀಶ್ ಕಣ್ಣೀರಿಟ್ಟರು.
‘ಐಪಿಸಿ ಕಲಂ 302 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆಯ ನಡೆಯುತ್ತಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.
ಘಟನೆಯ ನಂತರ ಗುರುವಾರ ಬೆಳಿಗ್ಗೆ ಕಲ್ಲಹಳ್ಳಿ ಬಡಾವಣೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.