ADVERTISEMENT

ಕನ್ನಡಿಗರ ಬದುಕಿಗೇ ‘ಗ್ಯಾರಂಟಿ’ ಇಲ್ಲ: ಯಡಿಯೂರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 14:29 IST
Last Updated 21 ಏಪ್ರಿಲ್ 2024, 14:29 IST
   

ಬೆಂಗಳೂರು:‘ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ಕನ್ನಡಿಗರಿಗೆ ಅದರಲ್ಲೂ ಹಿಂದೂಗಳ ಬದುಕಿಗೆ ಗ್ಯಾರಂಟಿ ಇಲ್ಲ. ಕಾಂಗ್ರೆಸ್‌ ಪಕ್ಷ ರಾಜ್ಯವನ್ನು ಮತಾಂಧರ ಯುದ್ಧಭೂಮಿಯನ್ನಾಗಿ ಮಾಡಿದೆ’ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು, ‘ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು, ರಾಮಭಕ್ತರು ಮತ್ತು ಇತರ ಸಾಮಾನ್ಯ ಹಿಂದೂಗಳ ಮೇಲೂ ಮತಾಂಧರಿಂದ ನಿತ್ಯವೂ ದಾಳಿ ನಡೆಯುತ್ತಿದೆ. ಸರ್ಕಾರ ಅಂತಹ ಶಕ್ತಿಗಳನ್ನು ಮಟ್ಟ ಹಾಕುವುದರ ಬದಲಿಗೆ, ಅವರ ಬೆಂಬಲಕ್ಕೆ ನಿಂತಿದೆ’ ಎಂದು ಕಿಡಿಕಾರಿದರು.

ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಕೊಲೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ಮಿತಿಮೀರಿವೆ. ಸಾಮಾನ್ಯರು ನಿರ್ಭೀತಿಯಿಂದ ಓಡಾಡುವ ಸ್ಥಿತಿ ಇಲ್ಲ. ಇದೊಂದು ಕ್ರೂರ ಸರ್ಕಾರ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಾಗಿದೆ. ಈಕೆ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಮಗಳು. ಇವರಿಗೇ ನ್ಯಾಯಕೊಡಿಸುವ ಕೆಲಸ ಮುಖ್ಯಮಂತ್ರಿಯಿಂದ ಆಗಿಲ್ಲ ಎಂದು ಹರಿಹಾಯ್ದರು.

ADVERTISEMENT

ಬಿಜೆಪಿ ಕಾರ್ಯಕರ್ತರ ಮೇಲೆ ಮತಾಂಧರು ಕಾರು ಹರಿಸಿದ್ದಾರೆ. ರಾಮನವಮಿ ದಿನ ರಾಮಭಕ್ತರ ಮೇಲೆ ಹಲ್ಲೆ ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಉಡುಪಿ ಹಾಸ್ಟೆಲೊಂದರಲ್ಲಿ ಯುವತಿಯ ವಿಡಿಯೊ ಚಿತ್ರೀಕರಣ, ಬೆಳಗಾವಿಯಲ್ಲಿ ದಲಿತ ಮಹಿಳೆಯ ವಿವಸ್ತ್ರ ಘಟನೆಗಳಿಂದ ರಾಜ್ಯದಲ್ಲಿ ಭಯ– ಭೀತಿಯ ವಾತಾವರಣ ಮೂಡಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಕೋಲಾರ ಮತ್ತು ಶಿವಮೊಗ್ಗದಲ್ಲಿ ಔರಂಗಜೇಬ್‌ ಮತ್ತು ತಲ್ವಾರ್‌ಗಳ ಕಟೌಟ್‌ ಹಾಕಿದ್ದರು. ಮಂಡ್ಯದಲ್ಲಿ ಪೊಲೀಸ್‌ ಅಧಿಕಾರಿಗಳ ಮೂಲಕ ಹನುಮಧ್ವಜ ಇಳಿಸಿದ್ದಾರೆ. ಹನುಮ ಭಕ್ತರನ್ನು ಥಳಿಸಿದ ಕ್ರೂರ ಸರ್ಕಾರವಿದು. ಕಲಾವಿದೆ ಹರ್ಷಿಕಾ ಪೂಣಚ್ಚ ಮೇಲೆ ಹಲ್ಲೆ ನಡೆದಿದೆ. ವಂಟಮೂರಿಯಲ್ಲಿ ಮಹಿಳೆ ಬೆತ್ತಲುಗೊಳಿಸಿ ಅಮಾನುಷವಾಗಿ ನಡೆದುಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಡಿ.ವಿ.ಸದಾನಂದಗೌಡ ಮಾತನಾಡಿ, ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲ. ಹಿಂದೂಗಳನ್ನು ತೃತೀಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಮುಸ್ಲಿಂ ಮತಾಂಧರ ಹಾವಳಿ ಮಿತಿಮೀರಿದೆ ಎಂದು ಹರಿಹಾಯ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.