ADVERTISEMENT

ಸಿ.ಎಂ– ಡಿಸಿಎಂ ಕೈಯಲ್ಲಿ ‘ಸ್ಯಾಂಟೋಸ್‌ ಕಾರ್ಟಿಯರ್’: ಮತ್ತೆ ದುಬಾರಿ ವಾಚ್ ಸದ್ದು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
ಸಿದ್ದರಾಮಯ್ಯ– ಡಿ.ಕೆ. ಶಿವಕುಮಾರ್ ಅವರ ಕೈಯಲ್ಲಿ ಸ್ಯಾಂಟೋಸ್‌ ಕಾರ್ಟಿಯರ್ ವಾಚ್
ಸಿದ್ದರಾಮಯ್ಯ– ಡಿ.ಕೆ. ಶಿವಕುಮಾರ್ ಅವರ ಕೈಯಲ್ಲಿ ಸ್ಯಾಂಟೋಸ್‌ ಕಾರ್ಟಿಯರ್ ವಾಚ್   

ಬೆಂಗಳೂರು: ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಕೈಯಲ್ಲಿದ್ದ ದುಬಾರಿ ಬೆಲೆಯ ‘ಹುಬ್ಲೊ ವಾಚ್‌’ ದೊಡ್ಡ ಸದ್ದು ಮಾಡಿತ್ತು. ಈಗ ಮತ್ತೊಮ್ಮೆ, ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟಿಕೊಂಡಿದ್ದ ‘ಸ್ಯಾಂಟೋಸ್‌ ಕಾರ್ಟಿಯರ್’ ವಾಚ್ ವಿರೋಧ ಪಕ್ಷಗಳಿಗೆ ಆಹಾರವಾಗಿದೆ.

‘ಸ್ಯಾಂಟೋಸ್‌ ಕಾರ್ಟಿಯರ್ ಬೆಲೆ ₹ 43 ಲಕ್ಷ’ ಎಂದು ಹೇಳಿರುವ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಸಿದ್ದರಾಮಯ್ಯ ಅವರ ವಿರುದ್ಧ ಟೀಕೆಗೆ ಮಾಡಿವೆ. ಬೆಳಗಾವಿ ಅಧಿವೇಶನದ ಶುರುವಾಗುವ ಕೆಲವೇ ದಿನಗಳ ಮೊದಲು, ‘ದುಬಾರಿ ವಾಚ್‌’ನ ವಿಷಯ ಪ್ರತಿಪಕ್ಷಗಳ ಕೈಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. 

ಶಿವಕುಮಾರ್ ಅವರ ನಿವಾಸದಲ್ಲಿ ಮಂಗಳವಾರ (ಡಿ. 2) ನಡೆದ ಉಪಾಹಾರ ಕೂಟದ ಬಳಿಕ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಾಧ್ಯಮದವರ ಜತೆ ಮಾತನಾಡಿದ್ದರು. ಈ ವೇಳೆ, ಅವರ ಕೈಗಳಲ್ಲಿದ್ದ ವಾಚ್‌ ಮಾಧ್ಯಮದವರ ಕಣ್ಣಿಗೆ ಬಿದ್ದಿತ್ತು. ಒಗ್ಗಟ್ಟು ಪ್ರದರ್ಶಿಸಲು ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್‌ನ ವಾಚ್ ಕಟ್ಟಿದ್ದರು ಎನ್ನುವ ಮಾತು ಕೇಳಿಬರುತ್ತಿವೆ.

ADVERTISEMENT

ಹ್ಯುಬ್ಲೊ ವಾಚ್:

ಸಿದ್ದರಾಮಯ್ಯ ಅವರು ಹಿಂದಿನ ಅವಧಿ ಮುಖ್ಯಮಂತ್ರಿಯಾಗಿದ್ದ ವೇಳೆ, ಈಗ ವಿಧಾನಪರಿಷತ್ತಿನ ಬಿಜೆಪಿ ಸದಸ್ಯರಾಗಿರುವ ಎಚ್.ವಿಶ್ವನಾಥ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಭೇಟಿಗೆ ಹೋಗಿದ್ದಾಗ, ಸಿದ್ದರಾಮಯ್ಯ ಅವರು ಕಟ್ಟಿದ್ದ ಸುಮಾರು ₹70 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಾಚ್‌ ಅನ್ನು ಅನಾಮಧೇಯರು ವಿಡಿಯೊ ಮಾಡಿದ್ದರು.

ಆಗ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು, ಹ್ಯುಬ್ಲೊ ವಾಚ್‌ನ ವಿಡಿಯೊ ಹಾಗೂ ಚಿತ್ರಗಳನ್ನು ಬಿಡುಗಡೆ ಮಾಡಿದ್ದಲ್ಲದೇ, ಆ ವಾಚ್‌ನ ಮೂಲ ಎಲ್ಲಿಯದು ಎಂದು ಪ್ರಶ್ನಿಸಿದ್ದರು. ಅದೇ  ಆಸುಪಾಸಿನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಅಂದೂ ಪ್ರತಿಪಕ್ಷಗಳಾಗಿದ್ದ ಬಿಜೆಪಿ, ಜೆಡಿಎಸ್‌ ನಾಯಕರು ಈ ವಿಷಯವನ್ನು ‍ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದ್ದರು. 

ಗದ್ದಲ, ಧರಣಿಗಳಿಂದಾಗಿ ಕಲಾಪ ನಡೆದಿರಲಿಲ್ಲ. ಆಗ ಮಧ್ಯ ಪ್ರವೇಶಿಸಿದ್ದ ಸಿದ್ದರಾಮಯ್ಯ ಸದನದಲ್ಲಿಯೇ ತಮ್ಮ ಬಳಿ ಇದ್ದ ವಾಚ್‌ ಅನ್ನು, ಅಂದು ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರಿಸಿದ್ದರು. ಅದನ್ನು ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿರುವ ಬೆಲೆ ಬಾಳುವ ವಸ್ತುಗಳ ಜತೆಯಲ್ಲಿಯೇ ಇಡುವಂತೆ ಮನವಿ ಮಾಡಿದ್ದರು. ಆ ಪ್ರಕರಣ ಅಲ್ಲಿಗೆ ಕೊನೆಯಾಗಿತ್ತು.

ಈ ವಾಚ್‌ನ ಬೆಲೆ ಎಷ್ಟು?
ಸ್ವಿಡ್ಜರ್ಲೆಂಡ್‌ನ ಸ್ಯಾಂಟೋಸ್‌ ಕಾರ್ಟಿಯರ್ ಕಂಪನಿಯು ವಾಚ್‌ ಆಭರಣ ಬ್ಯಾಗ್‌ ಸೆಂಟ್‌ ಸೇರಿದಂತೆ ದುಬಾರಿ ಬೆಲೆಯ ಲೈಫ್‌ಸ್ಟೈಲ್ ಉತ್ಪನ್ನಗಳನ್ನು ತಯಾರಿಸುತ್ತದೆ. ಈ ಕಂಪನಿಯ ವಾಚ್‌ನ ಬೆಲೆ ಸರಿಸುಮಾರು ₹4 ಲಕ್ಷದಿಂದ ಆರಂಭವಾಗಿ ₹2.5 ಕೋಟಿಯವರೆಗೂ ಇದೆ. ಸಿದ್ದರಾಮಯ್ಯ ಅವರ ಕೈಯಲ್ಲಿದ್ದ ವಾಚ್‌ನ ಬೆಲೆ ₹43 ಲಕ್ಷ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.  ಆದರೆ ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಅವರ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

₹24 ಲಕ್ಷ ವಾಚ್‌:

ಡಿಕೆಶಿ ‘ನನ್ನ ವಾಚ್ ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನನ್ನ ಕ್ರೆಡಿಟ್‌ ಕಾರ್ಡ್ ಮೂಲಕ ₹ 24 ಲಕ್ಷ ಕೊಟ್ಟು ಖರೀದಿ ಮಾಡಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ದುಬಾರಿ ವಾಚ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಇದನ್ನು ನನ್ನ ಚುನಾವಣಾ ಅಫಿಡವಿಟ್‌ನಲ್ಲೂ ಘೋಷಿಸಿಕೊಂಡಿದ್ದೇನೆ’ ಎಂದೂ ಹೇಳಿದರು. ‘ಸಿದ್ದರಾಮಯ್ಯ ಅವರ ಕುರಿತ ಟೀಕೆ ಬಗ್ಗೆ ನನಗೆ ಗೊತ್ತಿಲ್ಲ. ಇಷ್ಟವಾದ ವಾಚ್ ಧರಿಸುವ ಹಕ್ಕು ಇಬ್ಬರಿಗೂ ಇದೆ. ಅವರಿಗೆ ಅವರ ಮಗ ವಾಚ್ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿ ಮಾಡಿರಬಹುದು. ನಮ್ಮ ತಂದೆಗೆ ವಾಚ್‌ಗಳೆಂದರೆ ಬಹಳ ಇಷ್ಟ. ಅವರ ಬಳಿ ಏಳು ವಾಚ್‌ಗಳಿದ್ದವು. ಅವರು ಸತ್ತ ನಂತರ ಅದನ್ನು ಯಾರು ಧರಿಸಬೇಕು? ನಾನು ಧರಿಸಬೇಕು ಇಲ್ಲವೇ ನನ್ನ ತಮ್ಮ ಧರಿಸಬೇಕು’ ಎಂದು ಪ್ರತಿಪಾದಿಸಿದರು.

‘ಸರಳ ಸಮಾಜವಾದಿ’ ಕೈಯಲ್ಲಿ ಕಾರ್ಟಿಯರ್– ಬಿಜೆಪಿ
‘ಸಿದ್ದರಾಮಯ್ಯನವರೇ ಸಮಾಜವಾದದ ನಿಮ್ಮ ವ್ಯಾಖ್ಯಾನಕ್ಕೆ ಹೆಚ್ಚಿನ ಬೆಲೆ ಬಂದಂತೆ ಕಾಣುತ್ತಿದೆ. ಕರ್ನಾಟಕದ ಜನರು ಬರ ಮತ್ತು ಮೂಲಸೌಕರ್ಯ ಸಮಸ್ಯೆಯಿಂದಾಗಿ ಪರದಾಡುತ್ತಿದ್ದಾರೆ. ಆದರೆ ನಮ್ಮ ‘ಸರಳ ಸಮಾಜವಾದಿ’ ಮುಖ್ಯಮಂತ್ರಿ ಸ್ಯಾಂಟೋಸ್ ಡಿ ಕಾರ್ಟಿಯರ್ ವಾಚ್ ಧರಿಸಿ ಅದನ್ನು ಪ್ರದರ್ಶಿಸುತ್ತಿದ್ದಾರೆ’ ಎಂದು ಬಿಜೆಪಿ ‘ಎಕ್ಸ್‌’ ಮಾಡಿದೆ.
ಅಸಲಿಗೆ ದೊಡ್ಡ ಮಜಾವಾದಿ– ಜೆಡಿಎಸ್
‘ಹೇಳಿಕೊಳ್ಳುವುದು ನಾನೊಬ್ಬ ಸಮಾಜವಾದಿ. ಅಸಲಿಗೆ ದೊಡ್ಡ ಮಜಾವಾದಿ. ಅಂದು ₹ 70 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ‘ಹ್ಯೂಬ್ಲೊ ವಾಚ್‌’ ಕಟ್ಟಿ ಟೀಕೆಗೆ ಗುರಿಯಾಗಿದ್ದರು. ಇಂದು ಅವರ ಕೈಯಲ್ಲಿ ಚಿನ್ನದಿಂದ ತಯಾರಿಸಿದ ಕಾರ್ಟಿಯರ್‌ ಬ್ರ್ಯಾಂಡ್‌ನ ₹ 43 ಲಕ್ಷ ಬೆಲೆ ಬಾಳುವ ಐಷಾರಾಮಿ ವಾಚ್‌. ಸಿದ್ದರಾಮಯ್ಯ ಅವರೇ, ಸಮಾಜವಾದದ ಬಗ್ಗೆ ಬೊಗಳೆ ಭಾಷಣ ಮಾಡಲು ನಿಮಗೆ ಯಾವ ನೈತಿಕತೆ ಇದೆ’ ಎಂದು ಜೆಡಿಎಸ್‌ ‘ಎಕ್ಸ್‌’ ಮಾಡಿ ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.