ADVERTISEMENT

ಸಚಿವ ಕತ್ತಿ ಹೇಳಿಕೆಗೆ ರೇಣುಕಾಚಾರ್ಯ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 16:45 IST
Last Updated 16 ಫೆಬ್ರುವರಿ 2021, 16:45 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ಬೆಂಗಳೂರು: ಟಿವಿ, ಬೈಕ್‌, ಫ್ರಿಡ್ಜ್‌ ಹೊಂದಿರುವ ಕುಟುಂಬಗಳ ಬಿಪಿಎಲ್‌ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂಬ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರ ಹೇಳಿಕೆಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಬಡವರ ಪರ ಇದೆ. ಸಚಿವರು ದ್ವಂದ್ವ ಹೇಳಿಕೆಗಳನ್ನು ನೀಡಬಾರದು. ಅದು ಸಚಿವ ಕತ್ತಿಯವರ ಹೇಳಿಕೆಯೋ ಅಥವಾ ಯಾರೋ ಐಎಎಸ್‌ ಅಧಿಕಾರಿ ಹೇಳಿದ್ದನ್ನೇ ಅವರು ಹೇಳಿದ್ದಾರೋ ಗೊತ್ತಿಲ್ಲ’ ಎಂದರು.

ಬಡವರು ಟಿವಿ ನೋಡಬಾರದೆ? ಈಗ ಬ್ಯಾಂಕ್‌ಗಳಲ್ಲಿ ಠೇವಣಿ ಇಲ್ಲದಿದ್ದರೂ ಬೈಕ್‌ ಖರೀದಿಗೆ ಸಾಲ ನೀಡಲಾಗುತ್ತದೆ. ಈ ಯಾವುದಕ್ಕೂ ಸರ್ಕಾರ ಹಣ ನೀಡುವುದಿಲ್ಲ. ಅನರ್ಹರು ಪಡೆದಿರುವ ಬಿಪಿಎಲ್‌ ಚೀಟಿಗಳನ್ನು ಬೇಕಾದರೆ ರದ್ದುಮಾಡಲಿ. ಆದರೆ, ಬಡವರಿಗೆ ನೀಡಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ADVERTISEMENT

ಅಪಪ್ರಚಾರ ಬೇಡ: ‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪ‍ರ್ಧಿಸಿ ಸೋತ ವ್ಯಕ್ತಿಯೊಬ್ಬರು ಸಕ್ರಿಯರಾಗಿದ್ದಾರೆ. ಅವರು ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಈ ಕೆಲಸವನ್ನು ತಕ್ಷಣ ನಿಲ್ಲಿಸಬೇಕು’ ಎಂದು ರೇಣುಕಾಚಾರ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.