ADVERTISEMENT

ಜಿಲ್ಲಾವಾರು ಕಾಂಗ್ರೆಸ್ ಒಬಿಸಿ ಸಮಾವೇಶ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 13:25 IST
Last Updated 1 ನವೆಂಬರ್ 2022, 13:25 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಚಿತ್ರದುರ್ಗ: ಪಕ್ಷ ಸಂಘಟನೆಯ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಸ್.ಮಧು ಬಂಗಾರಪ್ಪ ತಿಳಿಸಿದರು.

‘ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ವರಿಷ್ಠರು ನೀಡಿದ್ದಾರೆ. ಡಿಸೆಂಬರ್ ಅಥವಾ ಜನವರಿ ಅಂತ್ಯದ ವೇಳೆಗೆ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಸಮಾವೇಶ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಬಳಿಕ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು. ರಾಷ್ಟ್ರ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಐದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸು ಗುರಿ ಹೊಂದಲಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬಿಜೆಪಿಗೆ ಪ್ರತಿಯಾಗಿ ಇಂತಹ ಸಮಾವೇಶ ನಡೆಸುತ್ತಿಲ್ಲ. ಹಿಂದುಳಿದ ವರ್ಗದ ವಿಭಾಗದ ಜವಾಬ್ದಾರಿ ವಹಿಸಿಕೊಂಡಾಗಲೇ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಚುನಾವಣೆ ಸಮೀಪಿಸಿದಾಗ ಮಾತ್ರ ಬಿಜೆಪಿಗೆ ಹಿಂದುಳಿದ ವರ್ಗ ನೆನಪಾಗುತ್ತದೆ. ನಾರಾಯಣಗುರು ಅವರನ್ನು ಸ್ಮರಿಸುವ ನಾಟಕ ಮಾಡಲಾಗುತ್ತದೆ. ಹಿಂದುಳಿದ ಸಮುದಾಯದ ಸಮಾವೇಶ ನಡೆಸುವ ಯೋಗ್ಯತೆ ಬಿಜೆಪಿಗೆ ಇಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ರಾಜ್ಯದ ಪರಿಸ್ಥಿತಿಯ ದೃಷ್ಟಿಯಿಂದ ಕಾಂಗ್ರೆಸ್ ಮರಳಿ‌ ಅಧಿಕಾರಕ್ಕೆ ಬರುವ ಅಗತ್ಯವಿದೆ. ಭೂಮಿ ಹಕ್ಕು, ರೈತರಿಗೆ ಉಚಿತ ವಿದ್ಯುತ್ ನೀಡಿದ ಹೆಗ್ಗಳಿಕೆ ಕಾಂಗ್ರೆಸ್‌ಗೆ ಇದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಹಿಂದುಳಿದ ವರ್ಗಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಹಲವು ಪಕ್ಷಗಳಲ್ಲಿ ಚದುರಿ ಹೋಗಿರುವ ಬಂಗಾರಪ್ಪ ಅಭಿಮಾನಿಗಳು, ಹಿತೈಷಿಗಳು ಕಾಂಗ್ರೆಸ್‌ಗೆ ಮರಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.