ADVERTISEMENT

ಬಿಜೆಪಿ ಮುಂದಿನ ಗುರಿ ಮಧ್ಯಪ್ರದೇಶವೇ?

ಕಾಂಗ್ರೆಸ್ ಶಾಸಕರು ಖರೀದಿಗಿಲ್ಲ: ಮುಖ್ಯಮಂತ್ರಿ ಕಮಲನಾಥ್‌ ಸ್ಪಷ್ಟನೆ

ರಾಕೇಶ್ ದೀಕ್ಷಿತ್
Published 24 ಜುಲೈ 2019, 19:08 IST
Last Updated 24 ಜುಲೈ 2019, 19:08 IST
   

ಭೋಪಾಲ್‌: ‘ನಮ್ಮ ಶಾಸಕರು ಖರೀದಿಗಿಲ್ಲ’ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಹೇಳಿದ್ದಾರೆ. ಸರ್ಕಾರ ಐದು ವರ್ಷದ ಅವಧಿ ಪೂರ್ಣಗೊಳಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿನ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನದ ಮರುದಿನವೇ ಅವರು ಈ ಹೇಳಿಕೆ ಕೊಟ್ಟಿದ್ದಾರೆ.

ಆದರೆ, ‘ನಮ್ಮ ನಂ. 1 ಅಥವಾ ನಂ. 2 ನಾಯಕರು ಸೂಚನೆ ಕೊಟ್ಟರೆ ನಿಮ್ಮ ಸರ್ಕಾರ 24 ಗಂಟೆಯೂ ಉಳಿಯದು’ ಎಂದು ವಿರೋಧ ಪಕ್ಷದ ನಾಯಕ ಗೋಪಾಲ ಭಾರ್ಗವ ಅವರು ಮಂಗಳವಾರ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, ಧೈರ್ಯ ಇದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದು ಸವಾಲು ಒಡ್ಡಿದ್ದಾರೆ.

‘ನಿಮ್ಮ ನಂ. 1 ಮತ್ತು ನಂ. 2 ನಾಯಕರಿಗೆ ಇಂತಹ ಸೂಚನೆ ನೀಡದಿರುವಷ್ಟು ಬುದ್ಧಿ ಇದೆ’ ಎಂದೂ ಕಮಲನಾಥ್‌ ಹೇಳಿದ್ದಾರೆ.

ADVERTISEMENT

ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ತಮ್ಮ ರಾಜಕೀಯ ಜೀವನ ಕಳಂಕರಹಿತವಾದುದು ಎಂದರು. ಆಗ ಮಧ್ಯಪ್ರವೇಶಿಸಿದ ಭಾರ್ಗವ ‘ನಿಮ್ಮ ಸರ್ಕಾರ ಪತನದ ದಿನಗಣನೆ ಆರಂಭವಾಗಿದೆ’ ಎಂದು ಕುಟುಕಿದರು. ಆದರೆ, ಈ ಮಧ್ಯಪ್ರವೇಶಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಉರುಳಿಸುವುದಕ್ಕಾಗಿ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂದರು. ‘ಕಾಂಗ್ರೆಸ್‌ ಶಾಸಕರು ಖರೀದಿಗಿಲ್ಲ’ ಎಂದು ಈ ವೇಳೆ ಕಮಲನಾಥ್‌ ಹೇಳಿದರು.

ಕಾಂಗ್ರೆಸ್‌ನತ್ತ ಇಬ್ಬರು ಬಿಜೆಪಿ ಶಾಸಕರು

ಮಧ್ಯಪ್ರದೇಶದ ಬಿಜೆಪಿ ಶಾಸಕರಾದ ನಾರಾಯಣ ತ್ರಿಪಾಠಿ, ಶರದ್‌ ಕೋಲ್‌ ಅವರು ಅಪರಾಧ ಕಾನೂನು ಮಸೂದೆಯ ಪರವಾಗಿ ಮತ ಹಾಕಿದ್ದಾರೆ. ಈ ಇಬ್ಬರೂ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದರು. ಈಗ, ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.

230 ಸದಸ್ಯರ ಸದನದಲ್ಲಿ ಕಾಂಗ್ರೆಸ್‌ಗೆ 120 ಸದಸ್ಯರ ಬೆಂಬಲ ಇದೆ. ಮಸೂದೆಯನ್ನು ಮತಕ್ಕೆ ಹಾಕಿದಾಗ ಅದರ ಪರವಾಗಿ 122 ಮತಗಳು ದಾಖಲಾಗಿವೆ.ಇದು ತಮ್ಮ ‘ಘರ್ ವಾಪ್ಸಿ’ ಎಂದು ಈ ಶಾಸಕರು ಹೇಳಿದ್ದಾರೆ.

‘ನಮ್ಮ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಬಿಜೆಪಿಯ ಇಬ್ಬರು ಶಾಸಕರು ಸರ್ಕಾರದ ಪರವಾಗಿ ಮತ ಹಾಕಿದ್ದಾರೆ’ ಎಂದು ಕಮಲನಾಥ್‌ ಹೇಳಿದ್ದಾರೆ.

ಮಧ್ಯ ಪ್ರದೇಶ ಬಲಾಬಲ

ಒಟ್ಟು 230 ಬಹುಮತ: 116

ಕಾಂಗ್ರೆಸ್‌ 114

ಪಕ್ಷೇತರರು 4*

ಎಸ್‌ಪಿ 2*

ಬಿಎಸ್‌ಪಿ 1*

ಬಿಜೆಪಿ 109

(*ಪಕ್ಷೇತರರು, ಎಸ್‌ಪಿ, ಬಿಎಸ್‌ಪಿ ಬೆಂಬಲದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.