
ಮಹದಾಯಿ ಯೋಜನೆ ನಕ್ಷೆ
ನವದೆಹಲಿ: ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹದಾಯಿಯ ಬಂಡೂರಾ ನಾಲಾ ತಿರುವು ಯೋಜನೆಗೆ ಮತ್ತೆ ತಗಾದೆ ಎತ್ತಿರುವ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ), ಯೋಜನೆಯ ಕಾಮಗಾರಿಗೆ ಅರಣ್ಯ ಬಳಕೆಗೆ ಅನುಮತಿ ನೀಡಲು ನಿರಾಕರಿಸಿದೆ.
ಯೋಜನೆಗೆ ಪೈಪ್‌ಲೈನ್, ಪಂಪ್‌ಹೌಸ್, ವಿದ್ಯುತ್ ಮಾರ್ಗ ನಿರ್ಮಾಣಕ್ಕಾಗಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನೆರಸೆ, ಮಂತುರ್ಗ ಹಾಗೂ ಬಚೋಲಿ ಗ್ರಾಮಗಳ 71 ಎಕರೆ ಅರಣ್ಯ ಬಳಕೆಗೆ ಅನುಮೋದನೆ ಕೋರಿ ಕರ್ನಾಟಕ ನೀರಾವರಿ ನಿಗಮವು ಕೇಂದ್ರಕ್ಕೆ ಮೂರು ವರ್ಷಗಳ ಪ್ರಸ್ತಾವ ಸಲ್ಲಿಸಿತ್ತು. ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಿಂದ ಹತ್ತು ಹಲವು ಸ್ಪಷ್ಟೀಕರಣಗಳನ್ನು ಕೇಳಿತ್ತು.
ಈ ಯೋಜನೆಗೆ ಅನುಮೋದನೆ ನೀಡುವ ವಿಷಯದ ಚರ್ಚೆಗಷ್ಟೇ ಡಿಸೆಂಬರ್ 12ರಂದು ಸಮಿತಿಯು ಸಭೆ ನಡೆಸಿತ್ತು. ಸಭೆಯ ನಡಾವಳಿಯನ್ನು ಶುಕ್ರವಾರ ಸಂಜೆ ಬಿಡುಗಡೆ ಮಾಡಿದೆ. ಭೀಮಘಡ ಅಭಯಾರಣ್ಯದಿಂದ ಗ್ರಾಮಸ್ಥರ ಸ್ಥಳಾಂತರ ಮಾಡುತ್ತಿರುವ ಅರಣ್ಯ ಇಲಾಖೆಯ ಕಾರ್ಯಶೈಲಿಯನ್ನು ಸಮಿತಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಜತೆಗೆ, ರಾಜ್ಯ ಸರ್ಕಾರದಿಂದ ನಾಲ್ಕು ಸ್ಪಷ್ಟೀಕರಣಗಳನ್ನು ಸಮಿತಿ ಕೇಳಿದೆ. ಸಮಿತಿಯ ಈ ನಡೆಯಿಂದ, ಯೋಜನೆಗೆ ಅನುಮೋದನೆ ಸಿಗುವ ಭಾರಿ ವಿಶ್ವಾಸದಲ್ಲಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ಕೋರಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಮೂರು ವರ್ಷಗಳ ಹಿಂದೆ ರಾಜ್ಯ ಪ್ರಸ್ತಾವ ಕಳುಹಿಸಿತ್ತು. ಈ ವಿಷಯದ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಅಭಿಪ್ರಾಯ ಕೇಳಲು ವನ್ಯಜೀವಿ ಮಂಡಳಿ 2024ರ ಅಕ್ಟೋಬರ್‌ನಲ್ಲಿ ನಿರ್ಧರಿಸಿತ್ತು. ಆ ಬಳಿಕ ನಡೆದ ಆರು ಸಭೆಗಳಲ್ಲಿ ಕಳಸಾ ಪ್ರಸ್ತಾವ ಚರ್ಚೆಗೇ ಬಂದಿಲ್ಲ. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಇತ್ತೀಚಿನ ಸಭೆ ಡಿಸೆಂಬರ್ 9ರಂದು ನಡೆದಿತ್ತು.
ಅಭಯಾರಣ್ಯದ ಪಕ್ಕದಲ್ಲೇ ತಿರುವು: ಆರ್‌ಇಸಿ ಆಕ್ಷೇಪ
l ತಿರುವಿಗೆ ಪ್ರಸ್ತಾಪಿಸಲಾದ ಅರಣ್ಯ ಪ್ರದೇಶವು ಭೀಮಘಡ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶದಿಂದ ಕೇವಲ 29 ಮೀಟರ್ ದೂರದಲ್ಲಿದೆ. ಇದಲ್ಲದೆ, ಸಮಿತಿ ನಡೆಸಿದ ವಿಶ್ಲೇಷಣೆಯ ಪ್ರಕಾರ ತಿರುವಿನ ಪ್ರದೇಶವು ಸೂಕ್ಷ್ಮವಾದುದು ಎಂದು ಆರ್‌ಇಸಿ ಅಭಿಪ್ರಾಯಪಟ್ಟಿದೆ.
l ಅಭಯಾರಣ್ಯದಿಂದ 161 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬ ಅಂಶವು ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ಯೋಜನೆಯಲ್ಲಿದೆ. ಗ್ರಾಮಸ್ಥರನ್ನು ಸ್ಥಳಾಂತರಿಸುವ ಜಾಗ ಗುರುತಿಸಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಉತ್ತರ ನೀಡಿಲ್ಲ. ಈ ಬಗ್ಗೆ ಪಿಸಿಸಿಎಫ್ ಅವರಿಂದ ಮಾಹಿತಿ ಪಡೆದು ಉತ್ತರಿಸುವುದಾಗಿ ನೋಡಲ್ ಅಧಿಕಾರಿ ತಿಳಿಸಿದ್ದಾರೆ. ಈ ಧೋರಣೆ ಸರಿಯಲ್ಲ ಎಂದೂ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
l ಅಭಯಾರಣ್ಯದಿಂದ ಗ್ರಾಮಸ್ಥರ ಪುನರ್ವಸತಿಗೆ ರಾಜ್ಯ ಸರ್ಕಾರವು ಯಾವುದೇ ರಾಜ್ಯ ನೀತಿಯನ್ನು ಹೊಂದಿದೆಯೇ ಎಂದು ಆರ್‌ಇಸಿ ಪ್ರಶ್ನಿಸಿತು. ಪುನರ್ವಸತಿ ಯೋಜನೆಯು ಕೇಂದ್ರದ 2006ರ ಯೋಜನೆಯ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿದೆಯೇ ಎಂದೂ ವಿಚಾರಿಸಿತು. ಸ್ಥಳಾಂತರಗೊಳ್ಳಲಿರುವ ಗ್ರಾಮಸ್ಥರಿಂದ ಒಪ್ಪಿಗೆ ಪಡೆದಿರುವ ಬಗ್ಗೆ ವಿವರ ನೀಡುವಂತೆ ಸೂಚಿಸಿತು. ಆದಾಗ್ಯೂ, ರಾಜ್ಯ ಸರ್ಕಾರವು ಯಾವುದೇ ವಿವರವಾದ ಸ್ಥಳಾಂತರ ಯೋಜನೆ ಅಥವಾ ಸ್ಥಳಾಂತರಕ್ಕೆ ಗ್ರಾಮಸ್ಥರ ಒಪ್ಪಿಗೆ ನೀಡಿರುವ ವಿವರಗಳನ್ನು ರಾಜ್ಯ ಸಲ್ಲಿಸಿಲ್ಲ. ಹೀಗಾಗಿ, ಈ ಪುನರ್ವಸತಿ ಯೋಜನೆ ಅಪೂರ್ಣವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
l ಈ ಯೋಜನೆಯಿಂದ ವನ್ಯಜೀವಿಗಳ ಮೇಲೆ ಕನಿಷ್ಠ ಪರಿಣಾಮ ಉಂಟಾಗಲಿದೆ ಎಂದು ಪಿಸಿಸಿಎಫ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಆದರೆ, ತಿರುವಿನ ಪ್ರದೇಶವು ಶ್ರೀಮಂತ ಜೀವವೈವಿಧ್ಯ ಹೊಂದಿದೆ. ಪ್ರಸ್ತಾವಿತ ಯೋಜನೆಯ ಅನುಷ್ಠಾನದಿಂದ ಅಭಯಾರಣ್ಯಕ್ಕೆ ನೀರಿನ ಹರಿವು ಕಡಿಮೆ ಆಗುತ್ತದೆ ಮತ್ತು ಇದು ನದಿ ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.
l ಪರ್ಯಾಯ ಅರಣ್ಯೀಕರಣಕ್ಕೆ ಅಥಣಿ ತಾಲ್ಲೂಕಿನ ಹಾಲಳ್ಳಿ ಗ್ರಾಮದ ಜಾಗ ಗುರುತಿಸಿದೆ. ಈ ಪ್ರದೇಶವು ಮೀಸಲು ಅರಣ್ಯದ ಪಕ್ಕದಲ್ಲಿದೆ. ಒಂದು ವೇಳೆ ಈ ಪ್ರದೇಶವು ಅರಣ್ಯ ಗಡಿ ಭಾಗದಲ್ಲಿದ್ದರೆ ರಾಜ್ಯ ಸರ್ಕಾರವು ಪರಿಷ್ಕೃತ ಪರ್ಯಾಯ ಅರಣ್ಯೀಕರಣದ ಯೋಜನೆ ಸಲ್ಲಿಸಬೇಕು.
l ಮಹದಾಯಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಕರ್ನಾಟಕ ಸರ್ಕಾರ ಸಲ್ಲಿಸಿದ ಇತ್ತೀಚಿನ ವಿಶೇಷ ಮೇಲ್ಮನವಿ ಅರ್ಜಿಯ ವಿವರ ಸೇರಿದಂತೆ ಎಲ್ಲ ಅರ್ಜಿಗಳು ಸ್ಥಿತಿಗತಿಯ ವಿವರಗಳನ್ನು ಸಲ್ಲಿಸಬೇಕು.
ಅರಣ್ಯ ಇಲಾಖೆಗೆ ಗೋವಾ ಫೌಂಡೇಷನ್ ನೋಟಿಸ್
ಬಂಡೂರಿ ನಾಲಾದಿಂದ ಕರ್ನಾಟಕವು 7 ಟಿಎಂಸಿ ನೀರನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಆರೋಪಿಸಿ ಅರಣ್ಯ ಇಲಾಖೆಯ ಪಿಸಿಸಿಎಫ್ (ವನ್ಯಜೀವಿ) ಪಿ.ಸಿ.ರೇ ಅವರಿಗೆ ಗೋವಾ ಫೌಂಡೇಷನ್ ಡಿಸೆಂಬರ್ 30ರಂದು ನೋಟಿಸ್ ನೀಡಿದೆ. ನೋಟಿಸ್‌ಗೆ 15 ದಿನಗಳಲ್ಲಿ ಉತ್ತರ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದೆ.
ನದಿ ತಿರುವಿನಿಂದ ಭೀಮಘಡ ಹಾಗೂ ಮಹದಾಯಿ ವನ್ಯಜೀವಿಧಾಮದಿಂದ ಅಥವಾ ಪಕ್ಕದಿಂದ ನದಿ ನೀರನ್ನು ಬೇರೆಡೆಗೆ ಹರಿಸುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ. ಜತೆಗೆ, ನದಿ ತಿರುವಿನಿಂದ ವನ್ಯಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ಆರೋಪಿಸಿದೆ.
ಕಳಸಾ ನಾಲಾ ತಿರುವು ಯೋಜನೆಗೆ ಆಕ್ಷೇಪಿಸಿ ಗೋವಾ ಪಿಸಿಸಿಎಫ್ ಅವರು ಕರ್ನಾಟಕದ ಪಿಸಿಸಿಎಫ್ ಅವರಿಗೆ 2023ರ ಡಿಸೆಂಬರ್‌ನಲ್ಲಿ ನೋಟಿಸ್ ನೀಡಿದ್ದರು. ಅಧಿಕಾರ ವ್ಯಾಪ್ತಿ ಮೀರಿ ಗೋವಾ ಪಿಸಿಸಿಎಫ್ ನೋಟಿಸ್ ನೀಡಿದ್ದರು ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಷಯವನ್ನು ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯ ಗಮನಕ್ಕೂ ರಾಜ್ಯ ತಂದಿದೆ.
ಪುನರ್ವಸತಿ ಕಾರ್ಯಕ್ರಮ ಒಂದು ದೀರ್ಘಕಾಲೀನ ಪ್ರಕ್ರಿಯೆ ಹಾಗೂ ಸಂಪೂರ್ಣ ಸ್ವಯಂಪ್ರೇರಿತ. ಇದಕ್ಕೆ ಯಾವುದೇ ಕಾಲಮಿತಿ ಹಾಕಲು ಬರುವುದಿಲ್ಲ. ಅಲ್ಲದೆ, ಗ್ರಾಮಸಭೆಗಳ ಒಪ್ಪಿಗೆ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಪ್ರಕ್ರಿಯೆ ಕಡ್ಡಾಯ. ಇವುಗಳನ್ನು ಮಾಡದೆ ಪುನರ್ವಸತಿ ಯೋಜನೆ ರೂಪಿಸಿ ಸಮಿತಿಗೆ ಸಲ್ಲಿಸಿದ್ದು ಸರಿಯಲ್ಲ.ಗಿರಿಧರ್ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.