ADVERTISEMENT

ಮಹದಾಯಿ: ‘ವನ್ಯಜೀವಿ’ ಪರಿಶೀಲನೆಗೆ ಹುಲಿ ತಜ್ಞರು

ಮಂಜುನಾಥ್ ಹೆಬ್ಬಾರ್‌
Published 23 ಡಿಸೆಂಬರ್ 2023, 4:14 IST
Last Updated 23 ಡಿಸೆಂಬರ್ 2023, 4:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಮಹದಾಯಿ ಯೋಜನೆಯ ಭಾಗವಾದ ಕಳಸಾ ನಾಲಾ ತಿರುವು ಯೋಜನಾ ಪ್ರದೇಶ ಹಾಗೂ ವನ್ಯಜೀವಿ ಸಂರಕ್ಷಣಾ ಯೋಜನೆಯ ಪರಿಶೀಲನೆಗೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ರಚಿಸಿದೆ. ತಂಡವು ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದೂ ಪ್ರಾಧಿಕಾರ ಸೂಚಿಸಿದೆ. 

ಈ ತಂಡದಲ್ಲಿ ಎನ್‌ಟಿಸಿ ಹುಲಿ ಘಟಕದ ವಿಜ್ಞಾನಿ, ಎನ್‌ಟಿಸಿಎ ಪ್ರಾಧಿಕಾರದ ಸಹಾಯಕ ಅರಣ್ಯ ಮಹಾನಿರ್ದೇಶಕರು, ಕಾವೇರಿ ನೀರಾವರಿ ನಿಗಮದ ಸಲಹೆಗಾರ ವಿಜಯಕುಮಾರ್ ಗೋಗಿ ಹಾಗೂ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಇರಲಿದ್ದಾರೆ. ಈ ತಂಡವು ಯೋಜನಾ ಪ್ರದೇಶಕ್ಕೆ ಡಿಸೆಂಬರ್‌ ಕೊನೆಯ ವಾರದಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ. 

ADVERTISEMENT

ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಈ ಯೋಜನೆಗೆ ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿತ್ತು. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್‌ 29ರಂದು ಅನುಮೋದನೆ ನೀಡಿತ್ತು. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 1.78 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. 

ವನ್ಯಜೀವಿ ಧಾಮದಿಂದ ಈ ಯೋಜನೆಗೆ ನೀರು ಹರಿಸಲಾಗುತ್ತಿದೆ ಎಂದು ಗೋವಾ ಸರ್ಕಾರವು ತಗಾದೆ ಎತ್ತಿರುವುದರಿಂದ ವನ್ಯಜೀವಿ ಅನುಮೋದನೆ ಪಡೆಯಬೇಕಿದೆ. ಇದಕ್ಕಾಗಿ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ರಾಜ್ಯ ಪ್ರಸ್ತಾವ ಸಲ್ಲಿಸಿತ್ತು. ‘ಯೋಜನೆಯ ಅನುಷ್ಠಾನಕ್ಕೆ 26.92 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತಿದೆ. ಯೋಜನೆಗಾಗಿ ಕಾಳಿ ಹುಲಿ ಕಾರಿಡಾರ್‌ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 7.96 ಹೆಕ್ಟೇರ್‌ ಅರಣ್ಯ ಹಾಗೂ 2.71 ಹೆಕ್ಟೇರ್ ಅರಣ್ಯೇತರ ಪ್ರದೇಶ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ರಾಜ್ಯ ಸರ್ಕಾರವು ಪ್ರಸ್ತಾವದಲ್ಲಿ ಉಲ್ಲೇಖಿಸಿತ್ತು.

ಈ ನಡುವೆ, ‘ರಾಜ್ಯ ಸರ್ಕಾರ ರೂಪಿಸಿರುವ ವನ್ಯಜೀವಿ ಸಂರಕ್ಷಣಾ ಯೋಜನೆ ವೈಜ್ಞಾನಿಕವಾಗಿಲ್ಲ. ಪರ್ಯಾಯವಾಗಿ ಕಾಡು ಬೆಳೆಸಲು ಇನ್ನಷ್ಟು ಉಪಕ್ರಮಗಳನ್ನು ಕೈಗೊಳ್ಳಲು ಅವಕಾಶ ಇತ್ತು. ಈ ಬಗ್ಗೆ ರಾಜ್ಯಕ್ಕೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿ ರಾಜ್ಯದ ವನ್ಯಜೀವಿ ತಜ್ಞರು ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. 

ತಜ್ಞರ ತಂಡ ರಚನೆಯ ಸಂದರ್ಭದಲ್ಲಿ ಆದೇಶದಲ್ಲಿ ಇನ್ನಷ್ಟು ಉಲ್ಲೇಖಿಸಿರುವ ಪ್ರಾಧಿಕಾರ, ‘ರಾಜ್ಯ ಸರ್ಕಾರದ ವನ್ಯಜೀವಿ ಸಂರಕ್ಷಣಾ ಯೋಜನೆ ಚೆನ್ನಾಗಿದೆ. ಆದರೆ, ಯೋಜನೆಯನ್ನು ಇನ್ನಷ್ಟು ಸಮಗ್ರಗೊಳಿಸಲು ಅವಕಾಶ ಇದೆ. ತಂಡವು ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ಪರಿಶೀಲನೆ ನಡೆಸಿ ಸೂಕ್ತ ಶಿಫಾರಸುಗಳನ್ನು ಮಾಡಬೇಕು’ ಎಂದು ಹೇಳಿದೆ.

ಸ್ಥಳೀಯ ಜನರಿಗೆ, ವನ್ಯಜೀವಿಗಳಿಗೆ ಹಾಗೂ ಅವುಗಳ ಆವಾಸಸ್ಥಾನಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸಬೇಕು. ಯೋಜನಾ ಪ್ರದೇಶದ ಸುತ್ತಲಿನ ಅರಣ್ಯ ಪ್ರದೇಶಗಳಿಗೆ ಕಾನೂನಿನ ಅಡಿಯಲ್ಲಿ ಹೆಚ್ಚಿನ ಸಂರಕ್ಷಣೆ ಒದಗಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದೇನೆ. ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸ ಇದೆ. 

-ಗಿರಿಧರ್‌ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.