ADVERTISEMENT

ಬಂಡವಾಳಶಾಹಿ ಹಿಡಿತದಲ್ಲಿ ಪ್ರಜಾಪ್ರಭುತ್ವ: ಮಹದೇವ ಪ್ರಕಾಶ್‌ ಆತಂಕ

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್‌ ಆತಂಕ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:40 IST
Last Updated 28 ಫೆಬ್ರುವರಿ 2020, 19:40 IST

ಮೈಸೂರು: ಸಂತತಿವಾದಿಗಳು ಹಾಗೂ ಬಂಡವಾಳಶಾಹಿಗಳ ಹಿಡಿತದಲ್ಲಿ ಸಿಲುಕಿರುವ ಪ್ರಜಾಪ್ರಭುತ್ವ ದಿನೇದಿನೇ ನೆಲಕಚ್ಚುತ್ತಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್‌ ಆತಂಕ ವ್ಯಕ್ತಪಡಿಸಿದರು.

ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಶುಕ್ರವಾರ ಆಯೋಜಿ
ಸಿದ್ದ ‘ಭಾರತೀಯ ರಾಜಕಾರಣ ಎತ್ತ ಸಾಗುತ್ತಿದೆ?’ ವಿಷಯವಾಗಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸ್ವಾತಂತ್ರ್ಯದ ಸಂದರ್ಭದಲ್ಲಿ 560 ದೇಶೀಯ ಸಂಸ್ಥಾನಗಳನ್ನು ಸೇರಿಸಿ ಭಾರತದ ಒಕ್ಕೂಟವನ್ನು ರಚಿಸಲಾಯಿತು. ಆದರೆ, ಈಗ 5,600 ದೇಶೀಯ ಕುಟುಂಬಗಳು ಭಾರತೀಯ ರಾಜಕಾರಣವನ್ನು ನಿಯಂತ್ರಿಸುತ್ತಿವೆ. ಕಾಂಗ್ರೆಸ್‌, ಅಕಾಲಿದಳ, ಡಿಎಂಕೆ, ಶಿವಸೇನೆ, ತೆಲುಗು ದೇಶಂ, ಸಮಾಜವಾದಿ ಪಕ್ಷ, ಆರ್‌ಜೆಡಿ, ಜೆಡಿಎಸ್‌ ಸೇರಿದಂತೆ ಅನೇಕ ಪಕ್ಷಗಳನ್ನು ಒಂದೊಂದು ಕುಟುಂಬದವರು ಖಾಸಗಿ ಸ್ವತ್ತುಗಳಾಗಿಸಿಕೊಂಡಿದ್ದಾರೆ ಎಂದರು.

ADVERTISEMENT

‘ವಯಸ್ಸು, ವಿದ್ಯಾರ್ಹತೆ ಚರ್ಚೆ ಆಗಲಿ’

ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ, ರಾಜಕಾರಣಿಗಳ ವಿದ್ಯಾರ್ಹತೆ ಹಾಗೂ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮಹದೇವ ಪ್ರಕಾಶ್‌ ಪ್ರತಿಕ್ರಿಯಿಸಿದರು.

‘ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ. ಪಕ್ಷವೊಂದರಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ವ್ಯಕ್ತಿಯು ಸಕಾರಣ ಇಲ್ಲದೇ ರಾಜಕೀಯ ಉದ್ದೇಶಕ್ಕಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಆತನ ನಂತರ ಅತಿಹೆಚ್ಚು ಮತ ಪಡೆದಿರುವ ವ್ಯಕ್ತಿಯನ್ನು ಆಯ್ಕೆ ಮಾಡುವಂತಹ ವ್ಯವಸ್ಥೆ ಜಾರಿಯಾಗಬೇಕು’ ಎಂದರು. ‘ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೂ ವಿದ್ಯಾರ್ಹತೆ ನಿಗದಿಪಡಿಸಬೇಕು. ಒಬ್ಬರು ಎರಡು ಬಾರಿ ಮಾತ್ರ ಚುನಾಯಿತ ಪ್ರತಿನಿಧಿಯಾಗಲು ಅವಕಾಶ ಇರಬೇಕು. ನಿವೃತ್ತಿ ವಯಸ್ಸು 60 ವರ್ಷಕ್ಕೆ ನಿಗದಿಪಡಿಸಬೇಕು’ ಎಂದರು.

ಸಂವಿಧಾನದ ಬಗ್ಗೆ ಅನೇಕ ಶಾಸಕರಿಗೆ ಗೊತ್ತಿಲ್ಲ. ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಲು ಬಾರದಂತಹ ಈಡಿಯಟ್‌ ಶಾಸಕರಿದ್ದಾರೆ
ಮಹದೇವ ಪ್ರಕಾಶ್‌, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.