ADVERTISEMENT

ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗ: ಆದೇಶ ಪ್ರತಿ ಹಸ್ತಾಂತರಿಸಿದ ಸಿಎಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2026, 14:21 IST
Last Updated 28 ಜನವರಿ 2026, 14:21 IST
<div class="paragraphs"><p>(ಚಿತ್ರ ಕೃಪೆ–ಎಕ್ಸ್‌)</p></div>

(ಚಿತ್ರ ಕೃಪೆ–ಎಕ್ಸ್‌)

   

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಅವರ ಪುತ್ರಿ ಚೈತನ್ಯಾ ಬೀಳಗಿ ಅವರಿಗೆ, ರಾಜ್ಯ ಸರ್ಕಾರ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಿದೆ.

ಚೈತನ್ಯಾ ಬೀಳಗಿ ಅವರಿಗೆ ಸರ್ಕಾರಿ ಉದ್ಯೋಗದ ಆದೇಶ ಪ್ರತಿ ಹಸ್ತಾಂತರಿಸಿದ ಸಿಎಂ ಸಿದ್ದರಾಮಯ್ಯ, ತಂದೆಯಂತೆಯೇ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶುಭ ಹಾರೈಸಿದ್ದಾರೆ.

ADVERTISEMENT

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಫೊಸ್ಟ್‌ ಮಾಡಿರುವ ಸಿದ್ದರಾಮಯ್ಯ, 'ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ‌ ಅವರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಹಿನ್ನೆಲೆ ಅವರ ಪುತ್ರಿ ಚೈತನ್ಯಾ ಎಮ್.ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಇಂದು ಹಸ್ತಾಂತರಿಸಿ, ತಂದೆಯಂತೆಯೇ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶುಭ ಕೋರಿದೆ' ಎಂದು ಬರೆದುಕೊಂಡಿದ್ದಾರೆ.

ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಉಪಸ್ಥಿತರಿದ್ದರು.

ಕಲಬುರಗಿ ಜಿಲ್ಲೆಯ ಜೇವರ್ಗಿತ ತಾಲ್ಲೂಕಿನ ಗೌನಹಳ್ಳಿ ಬಳಿ ನ.24ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ, ಮಹಾಂತೇಶ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದರು.

ಬೀಳಗಿ ಅವರು ಬೆಳಗಾವಿ ‌ಜಿಲ್ಲೆ ರಾಮದುರ್ಗದಿಂದ ಕಲಬುರಗಿಯಲ್ಲಿ ನಡೆಯಲಿರುವ ಮದುವೆ ಸಮಾರಂಭದಲ್ಲಿ ‌ಪಾಲ್ಗೊಳ್ಳಲು ನಗರದತ್ತ ಹೊರಟಿದ್ದರು. ಸಂಜೆ 5.30ರ ಸುಮಾರಿಗೆ ಗೌನಹಳ್ಳಿ ಬಳಿ ಬೀಳಗಿ ಅವರ ಕುಟುಂಬವಿದ್ದ ಇನ್ನೋವಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿತ್ತು. ಇದರಿಂದಾಗಿ ಸ್ಥಳದಲ್ಲೇ ಅವರ ಸಹೋದರ ಸಂಬಂಧಿಗಳಾದ ಶಂಕರ ಬೀಳಗಿ, ಈರಣ್ಣ ಬೀಳಗಿ ಮೃತಪಟ್ಟಿದ್ದರು. ಮಹಾಂತೇಶ ಬೀಳಗಿ ಅವರು ಕಲಬುರಗಿಯ ಖಾಸಗಿ ‌ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ರಾಮದುರ್ಗದವರಾದ ಬೀಳಗಿ ಅವರು ಧಾರವಾಡ ಎಸಿಯಾಗಿ, ದಾವಣಗೆರೆ ‌ಜಿಲ್ಲಾಧಿಕಾರಿಯಾಗಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳನ್ನು ನಿಭಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.