ADVERTISEMENT

ಶಿಕ್ಷಕರ ನೇಮಕ: ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 23:31 IST
Last Updated 25 ಜನವರಿ 2026, 23:31 IST
   

ಸೊಲ್ಲಾಪುರ: ಮಹಾರಾಷ್ಟ್ರದ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ಮಹಾರಾಷ್ಟ್ರ ಶಿಕ್ಷಣ ಇಲಾಖೆಯ ‘ಪವಿತ್ರ ಪೋರ್ಟಲ್’ ತಂತ್ರಾಂಶದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಇನ್ಮುಂದೆ ಶಾಲೆಗಳ ಬೋಧನಾ ಮಾಧ್ಯಮಕ್ಕೆ ಅನುಗುಣವಾಗಿಯೇ ಶಿಕ್ಷಕರ ನೇಮಕಾತಿ ನಡೆಸಲು ತೀರ್ಮಾನಿಸಿದೆ.

ಹಳೆಯ ತಪ್ಪಿಗೆ ತಿದ್ದುಪಡಿ: ಹಿಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ‘ಪವಿತ್ರ’ ಪೋರ್ಟಲ್ ಮೂಲಕ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ನಿಯೋಜಿಸ ಲಾಗಿತ್ತು. ಇದರಿಂದ ಗಡಿಭಾಗದ ಕನ್ನಡಿಗರು ಹಾಗೂ ಭಾಷಾ ಹೋರಾಟಗಾರರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ADVERTISEMENT

ಮರಾಠಿ ಮಾತ್ರ ಬಲ್ಲ ಶಿಕ್ಷಕರು ಕನ್ನಡ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ನಡೆಸಲು ಸಾಧ್ಯವಿಲ್ಲ ಎಂಬ ಆಕ್ಷೇಪ ಕೇಳಿಬಂದಿತ್ತು.

ಈ ಬಗ್ಗೆ ಜತ್ತ ತಾಲ್ಲೂಕಿನ ಮಾಜಿ ಶಾಸಕ ವಿಕ್ರಮಸಿಂಹ ಸಾವಂತ ನೇತೃತ್ವದಲ್ಲಿ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರವು ಹೋರಾಟ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಭೇಟಿ ನೀಡಿ, ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ವಿಷಯ ತಂದಿದ್ದರು.

‘ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ಪ್ರಮುಖ ಜವಾಬ್ದಾರಿ’ ಎಂದು ಸೋಮಣ್ಣ ಬೇವಿನಮರದ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.