ADVERTISEMENT

ಕನ್ನಡಿಗರ ಹೋರಾಟ ಹತ್ತಿಕ್ಕಲು ‘ಧಮ್ಕಿ’ ಅಸ್ತ್ರ- ‘ಮಹಾ’ ಪೊಲೀಸರ ಕೆಂಗಣ್ಣು

ಕರ್ನಾಟಕಕ್ಕೆ ಸೇರಿಸಿ ಎಂದ ಯುವಜನರ ಮೇಲೆ ‘ಮಹಾ’ ಪೊಲೀಸರ ಕೆಂಗಣ್ಣು

ಸಂತೋಷ ಈ.ಚಿನಗುಡಿ
Published 7 ಡಿಸೆಂಬರ್ 2022, 20:32 IST
Last Updated 7 ಡಿಸೆಂಬರ್ 2022, 20:32 IST
   

ಬೆಳಗಾವಿ: ತಮ್ಮ ಊರುಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಹೋರಾಟ ಆರಂಭಿಸಿದ ಮಹಾರಾಷ್ಟ್ರದ ಕನ್ನಡಿಗರ ಧ್ವನಿ ಅಡಗಿಸಲು ಸಾಂಗ್ಲಿ ಜಿಲ್ಲಾಡಳಿತ ‘ಫೋನ್‌ ಎಚ್ಚರಿಕೆ’ ಅಸ್ತ್ರ ಬಳಸಿದೆ.

‘ಕರ್ನಾಟಕಕ್ಕೆ ಸೇರುವುದಾಗಿ ಯಾರೂ ಹೋರಾಟ ಮಾಡುವಂತಿಲ್ಲ, ಕನ್ನಡ ನಾಡಧ್ವಜ ಪ್ರದರ್ಶಿಸುವಂತಿಲ್ಲ. ಈ ಕೃತ್ಯ ಎಸಗಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಜತ್ತ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಪೊಲೀಸ್‌ ಪಾಟೀಲರ (ಮಹಾರಾಷ್ಟ್ರದಲ್ಲಿ ಗ್ರಾಮ ಮಾಹಿತಿದಾರ ಹುದ್ದೆ) ಮೂಲಕ ಎಚ್ಚರಿಕೆನೀಡಲಾಗಿದೆ.

‘ಡಿ.4ರಿಂದ ಅನಿರ್ದಿಷ್ಟ ಅವಧಿ ಹೋರಾಟ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಈ ಹೋರಾಟದಿಂದ ‘ಕೇಸ್‌’ ಎದುರಿಸಬೇಕಾಗುತ್ತದೆ ಎಂದು ಪೊಲೀಸ್‌ ಪಾಟೀಲರು ಫೋನ್‌ ಮೂಲಕ ಎಚ್ಚರಿಕೆ ನೀಡಿದ್ದಾರೆ. ನಾವೆಲ್ಲರೂ ಯುವಕ–ಯುವತಿಯರು ಇದ್ದೇವೆ. ಶಿಕ್ಷಣ, ನೌಕರಿಗೆ ಮುಂದೆ ಸಮಸ್ಯೆ ಮಾಡಬಹುದು ಎಂಬ ಭಯದಿಂದ ಹಿಂದೆ ಸರಿದಿದ್ದೇವೆ’ ಎಂದು ಮಹಾರಾಷ್ಟ್ರದ ಕನ್ನಡಿಗರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ADVERTISEMENT

ಮಹಾರಾಷ್ಟ್ರ ಸರ್ಕಾರಕ್ಕೆ ಬಿಸಿ...: ‘ಸಾಂಗ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ, ಜತ್ತ ಪೊಲೀಸ್‌ ಠಾಣೆಯಿಂದ ನಮಗೆ ಕರೆ ಬಂದಿದೆ. ಕೆಲವರಿಗೆ ಪತ್ರವನ್ನೂ ಕಳಿಸಿದ್ದಾರೆ. ಗಡಿ ಗ್ರಾಮಗಳಲ್ಲಿ ಕನ್ನಡಪರ ಹೋರಾಟ ನಡೆಸದಂತೆ ತಾಕೀತು ಮಾಡಬೇಕೆಂದು ತಿಳಿಸಲಾಗಿದೆ. ನಾವು ಮಹಾರಾಷ್ಟ್ರ ಸರ್ಕಾರಿ ನೌಕರರಾದ್ದರಿಂದ ನಮ್ಮ ಕೆಲಸ ಮಾಡಿದ್ದೇವೆ’ ಎಂದು ನಾಲ್ವರು ಪೊಲೀಸ್‌ ಪಾಟೀಲರು ಖುದ್ದಾಗಿ ಮಾಹಿತಿ
ನೀಡಿದರು.

ಮೊದಲ ಬಾರಿಗೆ ಜತ್ತ ತಾಲ್ಲೂಕಿನ ಯುವಜನರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಧ್ವನಿ ಎತ್ತಿದ್ದಾರೆ. ತಿಂಗಳಿಂದ ಜಾಥಾ, ಪ್ರತಿಭಟನೆ ಕೂಡ ಮಾಡಿದ್ದಾರೆ. ಕನ್ನಡ ನಾಡಧ್ವಜ ಹಾರಿಸಿ, ಹೊಸ ನಕಾಶೆ ಸಿದ್ಧಪಡಿಸಿ ಮಹಾರಾಷ್ಟ್ರದ ಗರ್ವಭಂಗ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕನಿಷ್ಠ ಸೌಕರ್ಯಗಳನ್ನೂ ನೀಡಿಲ್ಲ ಎಂದು ಆರೋಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಇದರಿಂದ ಬೆಚ್ಚಿಬಿದ್ದಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಕನ್ನಡಿಗರ ಹೋರಾಟ ಹತ್ತಿಕ್ಕಲು ‘ಧಮ್ಕಿ’ ಅಸ್ತ್ರ ಬಳಸಿದ್ದಾರೆ. ಅಘೋಷಿತ ನಿಷೇಧಾಜ್ಞೆಯಿಂದ ನಮ್ಮ ಹಕ್ಕು ಕಿತ್ತುಕೊಂಡಿದ್ದಾರೆ
ಎಂದೂ ಕನ್ನಡ ಯುವಕರು
ದೂರಿದರು.

ಜತ್ತ ತಾಲ್ಲೂಕಿನ ಖೋಜನೂರ, ಸಿಂಧೂರ, ಯಕ್ಕುಂಡಿ, ತಿಕ್ಕುಂಡಿ, ಖೋಜನವಾಡಿ, ಗೊಗಾಟ, ಬಸರಗಿ, ಸಂಕ ಗ್ರಾಮಗಳೂ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳ ಯುವಕರು ಡಿ.4ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲು
ಮುಂದಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.