ADVERTISEMENT

ಮಹಾರಾಷ್ಟ್ರ: ಮಳೆ ಅಬ್ಬರಕ್ಕೆ 100ಕ್ಕೂ ಹೆಚ್ಚು ಸಾವು

ಪಿಟಿಐ
Published 23 ಜುಲೈ 2021, 19:00 IST
Last Updated 23 ಜುಲೈ 2021, 19:00 IST
   

ಮುಂಬೈ: ಮಹಾರಾಷ್ಟ್ರದ ವಿವಿಧೆಡೆ ಮಳೆ ಸಂಬಂಧಿ ಅವಘಡಗಳಿಂದಾಗಿ100-110 ಮಂದಿ ಶುಕ್ರವಾರ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಕರಾವಳಿಯ ರಾಯಗಡ ಜಿಲ್ಲೆಯಲ್ಲಿ ನಡೆದ ಭೂಕುಸಿತದ ಸ್ಥಳದಿಂದ 50ಕ್ಕೂ ಹೆಚ್ಚು ಮೃತದೇಹಗಳನ್ನು ಮೇಲೆತ್ತಲಾಗಿದೆ. ಇನ್ನೂ 40–50 ಮಂದಿ ಮಣ್ಣಿನಡಿ ಸಿಲುಕಿರಬಹುದು ಎನ್ನಲಾಗಿದೆ. ರಾಯಗಡ ಜಿಲ್ಲೆಯ ಮಹಾಡ್‌ ತಾಲ್ಲೂಕಿನ ತಲಾಯ್‌ ಗ್ರಾಮದಲ್ಲಿ ಗುರುವಾರ ರಾತ್ರಿ ಭೂಕುಸಿತ ಸಂಭವಿಸಿತ್ತು. 50–60 ಮೀಟರ್‌ ಎತ್ತರದ ಗುಡ್ಡವು ನಿರಂತರ ಮಳೆಯಿಂದಾಗಿ ಕುಸಿದಿತ್ತು. ರತ್ನಾಗಿರಿ ಜಿಲ್ಲೆಯಲ್ಲಿಯೂ ಭೂಕುಸಿತ ಉಂಟಾಗಿದ್ದು 10 ಮಂದಿ ಮಣ್ಣಿನಡಿ ಸಿಲುಕಿರಬಹುದು ಎಂದು ಹೇಳಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಲೇ ಇದೆ. ಕೊಂಕಣದ ಗುಡ್ಡಗಾಡು ಪ್ರದೇಶಗಳಿಂದ ಅಪಾಯದ ಸ್ಥಳದಲ್ಲಿದ್ದ ಜನರನ್ನು ತೆರವು ಮಾಡಲಾಗಿದೆ.

ಕೊಲ್ಲಾಪುರ ಜಿಲ್ಲೆಯಲ್ಲಿ ಬಸ್ಸೊಂದು ಇನ್ನೇನು ಕೊಚ್ಚಿ ಹೋಗಲಿದೆ ಎನ್ನುವಷ್ಟರಲ್ಲಿ ಬಸ್‌ನಲ್ಲಿದ್ದ 11 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್‌) ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಗುರುವಾರ ರಾತ್ರಿಯೇ ಭೂಕುಸಿತ ಸಂಭವಿಸಿದ್ದರೂ ಭಾರಿ ಮಳೆ, ಪ್ರವಾಹ, ಕೆಸರಿನಿಂದಾಗಿ ರಕ್ಷಣಾ ಸಿಬ್ಬಂದಿಯು ಅವಘಡದ ಸ್ಥಳಕ್ಕೆ ತಲುಪುವುದು ತಡವಾಯಿತು ಎಂದು ರಾಯಗಡ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದ್ದಾರೆ. ವಿವಿಧ ಸ್ಥಳಗಳಲ್ಲಿ ಹಲವು ಮನೆಗಳು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT