ADVERTISEMENT

ಮಹರ್ಷಿ ವಾಲ್ಮೀಕಿ ಜಾತ್ರೆ: ಸಮುದಾಯದವರಿಂದ ಆಡಳಿತ ಚುಕ್ಕಾಣಿ ಹಿಡಿಯುವ ಸಂಕಲ್ಪ

ಹರಿದು ಬಂದ ಜನಸಾಗರ: ಮಠಾಧೀಶರಿಂದ ಒಗ್ಗಟ್ಟು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 16:59 IST
Last Updated 9 ಫೆಬ್ರುವರಿ 2019, 16:59 IST
ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ವಿವಿಧ ಮಠಾಧೀಶರು ಬೆಳ್ಳಿ ಕಿರೀಟ ಧಾರಣೆ ಮಾಡಿದರು–ಪ್ರಜಾವಾಣಿ ಚಿತ್ರ
ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ವಿವಿಧ ಮಠಾಧೀಶರು ಬೆಳ್ಳಿ ಕಿರೀಟ ಧಾರಣೆ ಮಾಡಿದರು–ಪ್ರಜಾವಾಣಿ ಚಿತ್ರ   

ದಾವಣಗೆರೆ: ವಾಲ್ಮೀಕಿ ಸಮಾಜದವರು ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿಯುವ ಸಂಕಲ್ಪವನ್ನು ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಶನಿವಾರ ಮುಕ್ತಾಯಗೊಂಡ ಎರಡು ದಿನಗಳ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಮಠಾಧೀಶರು, ರಾಜಕೀಯ ಮುಖಂಡರು ಮಾಡಿದರು.

ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಜನ, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿ ಸಮಾಜದ ಬಲ ಪ್ರದರ್ಶನ ಮಾಡುವ ಮೂಲಕ ರಾಜಕೀಯ ಪ್ರಾತಿನಿಧ್ಯವನ್ನು ಇನ್ನಷ್ಟು ಪಡೆಯುವ ಇಂಗಿತ ವ್ಯಕ್ತಪಡಿಸಿದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ಹಾಲುಮತ ಹಾಗೂ ವಾಲ್ಮೀಕಿ ಸಮು
ದಾಯ ಒಂದಾದರೆ ಈ ಸಮುದಾಯದವರು ರಾಜ್ಯದ ಚುಕ್ಕಾಣಿ ಹಿಡಿಯಲು ಸಾಧ್ಯ. ಮುಂಬರುವ ದಿನಗಳಲ್ಲಿ ಸಚಿವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಈ ಸಮಾಜದ ಮುಖಂಡರು ಮನಸ್ತಾಪವನ್ನು ನಾಲ್ಕು ಗೋಡೆಗಳ ನಡುವೆ ಕುಳಿತು ಬಗೆಹರಿಸಿಕೊಳ್ಳಬೇಕು. ಆಗ ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ಪಡೆಯಲು ಸಾಧ್ಯ. ಪ್ರಸನ್ನಾನಂದಪುರಿ ಸ್ವಾಮೀಜಿ ಆರಂಭಿಸಿದ ವಾಲ್ಮೀಕಿ ತೇರಿಗೆ ಸಮಾಜದ ನಾಯಕರು ಚಕ್ರಗಳಾಗಿ ಮುನ್ನಡೆಸಬೇಕು’ ಎಂದರು.

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, ‘ಶ್ರೀರಾಮುಲು ಹಾಗೂ ಸತೀಶ ಜಾರಕಿಹೊಳಿ ವಾಲ್ಮೀಕಿ ಸಮಾಜದ ಎರಡು ರತ್ನಗಳು. ಒಂದಲ್ಲ ಒಂದು ದಿನ ಇವರಿಗೆ ರಾಜ್ಯ ಆಳುವ ಕಾಲ ಬರಲಿದೆ. ಆಡಳಿತ ಎಂಬುದು ಯಾವುದೇ ಒಂದು ಜಾತಿಗೆ ಸೀಮಿತವಾಗಿರಬಾರದು. ಆಡಳಿತ ನೈಪುಣ್ಯತೆ ಇರುವ ಎಲ್ಲಾ ಸಮಾಜದವರಿಗೂ ಅವ
ಕಾಶ ಸಿಗಬೇಕು’ ಎಂದು ಪ್ರತಿಪಾದಿಸಿದರು.

ಶಾಸಕ ಬಿ. ಶ್ರೀರಾಮುಲು, ‘ನಮ್ಮ ಸಮಾಜದ ಒಗ್ಗಟ್ಟನ್ನು ಮುರಿಯಲು ಅನೇಕ ಶಕುನಿಗಳು ಬರುತ್ತಿದ್ದಾರೆ. ಅವರ ಷಡ್ಯಂತ್ರಗಳಿಗೆ ಅವಕಾಶ ನೀಡಬೇಡಿ. ವಾಲ್ಮೀಕಿ ಸಮಾಜ ಒಂದೇ ಎಂದು ನಾವೆಲ್ಲ ಐಕ್ಯತೆಯಿಂದ ಇದ್ದರೆ ಸಮಾಜಕ್ಕೆ ಒಳ್ಳೆಯ ರಾಜಕೀಯ ಭವಿಷ್ಯ ಇದೆ. ನಮ್ಮ ಸಮಾಜದ ಜನರೂ ತಲೆ ಎತ್ತಿ ನಡೆಯುವಂತೆ ಮಾಡುತ್ತೇವೆ’ ಎಂದು ಹೇಳಿದರು.

ಜಾತ್ರಾ ಸಮಿತಿ ಅಧ್ಯಕ್ಷರಾದ ಸತೀಶ ಜಾರಕಿಹೊಳಿ, ‘ಪ್ರತಿ ವರ್ಷ ವಾಲ್ಮೀಕಿ ಜಾತ್ರೆ ನಡೆಸುವ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ನಾನು ಯಾವುದೇ ಪಕ್ಷದಲ್ಲಿದ್ದರೂ ಸಮುದಾಯದ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಶೇ 7.5 ಮೀಸಲಾತಿ ಕೊಡಿಸಲು ಬದ್ಧ’

‘ವಾಲ್ಮೀಕಿ ಸಮಾಜದವರಿಗೆ ಶೇ 7.5ರಷ್ಟು ಮೀಸಲಾತಿ ಕೊಡಿಸಲು ಬದ್ಧರಿದ್ದೇವೆ’ ಎಂದು ಸತೀಶ ಜಾರಕಿಹೊಳಿ ಹಾಗೂ ಶ್ರೀರಾಮುಲು ಭರವಸೆ ನೀಡಿದರು.

‘ಶೇ 7.5ರಷ್ಟು ಮೀಸಲಾತಿ ಕಲ್ಪಿಸಲು ಜಾತ್ಯತೀತ, ಪಕ್ಷಾತೀತವಾಗಿ ನಾವೆಲ್ಲ ಶ್ರಮಿಸುತ್ತಿದ್ದೇವೆ. ನಮಗೆ ಅಧಿಕಾರ, ಪಕ್ಷ ಮುಖ್ಯವಲ್ಲ. ಸಮಾಜದ ಹಿತವೇ ಮುಖ್ಯ. ಮೀಸಲಾತಿ ಕಲ್ಪಿಸಲು ಸ್ವಲ್ಪ ವಿಳಂಬವಾಗಬಹುದು. ಆದರೆ, ಇದನ್ನು ಆದಷ್ಟು ಬೇಗ ಕೊಡಿಸುತ್ತೇವೆ’ ಎಂದು ಉಭಯ ನಾಯಕರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.