ಬೆಂಗಳೂರು: ‘ಭಗವಾನ್ ಮಹಾವೀರ ಅವರು ಅಹಿಂಸಾ ತತ್ವವನ್ನು ಜಗತ್ತಿಗೆ ಸಾರಿದರು. ಅಹಿಂಸೆಯೇ ಪರಮ ಧರ್ಮ ಎಂಬ ಅವರ ಮಾತು ಇಂದಿಗೂ, ಎಂದಿಗೂ ಪ್ರಸ್ತುತ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜೈನ್ ಯುವ ಸಂಘಟನೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಮಹಾವೀರ ಜಯಂತಿ ಹಾಗೂ ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು. ‘ಅಹಿಂಸಾ ತತ್ವದ ಪಾಲನೆಯಿಂದ ಎಲ್ಲರಿಗೂ ಒಳಿತಾಗುತ್ತದೆ. ಜೈನ ಧರ್ಮ ಮತ್ತು ಮಹಾವೀರರು ಮಾನವೀಯತೆಯನ್ನು ಬೋಧಿಸಿದರು. ಅದನ್ನು ಎಲ್ಲರೂ ಅಳವಡಿಸಿಕೊಳ್ಳಬಹುದು’ ಎಂದರು.
ಸಂಸದ ಪಿ.ಸಿ.ಮೋಹನ್, ‘ಜೈನ ಧರ್ಮ ಬೋಧಿಸಿದ ಮಾನವೀಯತೆಯ ಪಾಠವನ್ನು ಜೈನ್ ಯುವ ಸಂಘಟನೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅನುಸರಿಸಿಕೊಂಡು ಬರುತ್ತಿದೆ. ರಕ್ತದಾನ, ಅಶಕ್ತರಿಗೆ ಆರ್ಥಿಕ ನೆರವು, ಉಚಿತ ಆರೋಗ್ಯ ತಪಾಸಣೆ, ಅನ್ನಸಂತರ್ಪಣೆಗಳಲ್ಲಿ ತೊಡಗಿಸಿಕೊಂಡಿದೆ’ ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ ನಗರದ ಪುರಭವನ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಸಂಘಟನೆಯ ಸದಸ್ಯರು ಶೋಭಾಯಾತ್ರೆ ನಡೆಸಿದರು. ಮೆರವಣಿಗೆಯಲ್ಲಿದ್ದ ಹಿರಿಯರು ಮಹಾವೀರರ ತತ್ವಗಳನ್ನು ಕುರಿತ ಹಾಡುಗಳನ್ನು ಹಾಡುತ್ತಾ ನಡೆದರೆ, ಯುವಕರು ಅಂಗಡಿ–ಅಂಗಡಿಗೆ ಭೇಟಿ ನೀಡಿ ಗೋ ಸೇವೆಗಾಗಿ ದೇಣಿಗೆ ಸಂಗ್ರಹಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಶಾಂತಿ ಸಮಾವೇಶದ ಭಾಗವಾಗಿ ಆಯೋಜಿಸಲಾಗಿದ್ದ ಶಿಬಿರದಲ್ಲಿ 500ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಕಣ್ಣು ಮತ್ತು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಗೆ ಉಚಿತವಾಗಿ ಮಜ್ಜಿಗೆ, ತಂಪಾದ ನೀರು ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.