ADVERTISEMENT

ಮುಖ್ಯ ಎಂಜಿನಿಯರ್‌ ಹುದ್ದೆಗೆ ₹10ಕೋಟಿ ಕಪ್ಪ!

ವೈ.ಗ.ಜಗದೀಶ್‌
Published 24 ನವೆಂಬರ್ 2018, 20:03 IST
Last Updated 24 ನವೆಂಬರ್ 2018, 20:03 IST
   

ಬೆಂಗಳೂರು: ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳನ್ನು ನಿರ್ವಹಿಸುವ, ರಾಜ್ಯ ಕಟ್ಟುವ ‘ಕಾಯಕ ನಿರತ’ ಮುಖ್ಯ ಎಂಜಿನಿಯರ್‌ ಶ್ರೇಣಿಯ ಹುದ್ದೆಗಳಿಗೆ ಏರಬೇಕಾದರೆ ಯಾವುದೇ ಚೌಕಾಸಿಯಿಲ್ಲದೇ ₹10 ಕೋಟಿ ಕಪ್ಪ ಕೊಡಲೇಬೇಕು. ಇದು ಅಲಿಖಿತ ನಿಯಮ.

ಕಬ್ಬಿಗೆ ನ್ಯಾಯಯುತ ಬೆಲೆ (ಎಫ್‌ಆರ್‌ಪಿ) ಸಿಗುತ್ತಿಲ್ಲವೆಂದು ರೊಚ್ಚಿಗೆದ್ದ ರೈತರು ಹಿಂದಿನ ವಾರವಿಡೀ ಬೀದಿಗಿಳಿದು ರಂಪಾಟ ಮಾಡಿದರು. ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ತಮ್ಮ ಬೆವರಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೆಂದು ನೋವು ತೋಡಿಕೊಂಡರು. ಆದರೆ, ಲಾಗಾಯ್ತಿನಿಂದ ಆಳಿದವರು ಎಂಜಿನಿಯರ್‌, ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ಖುಲ್ಲಂಖುಲ್ಲಾ ‘ನ್ಯಾಯಯುತ’ ದರವನ್ನು ನಿಗದಿ ಮಾಡಿಬಿಟ್ಟಿದ್ದಾರೆ. ಈ ‘ಉಡುಗೊರೆ’ ಸಲ್ಲಿಕೆಯಾಗದೇ ಇದ್ದರೆ, ಲಾಭಕಟ್ಟಿನ ಹುದ್ದೆಗೆ ಏರುವುದು ಕಷ್ಟ.

ರಾಜ್ಯದಲ್ಲಿ ಮುಖ್ಯ ಎಂಜಿನಿಯರ್ ಶ್ರೇಣಿಯ 70 ಹುದ್ದೆಗಳು ಇವೆ. ಈ ಪೈಕಿ 31 ಹುದ್ದೆಗಳು ‘ನಗದು’ ಗಣಿಗಾರಿಕೆ ಪ್ರದೇಶಗಳ ಉಸ್ತುವಾರಿಯನ್ನು ಹೊಂದಿವೆ. ಇಲ್ಲಿ ಹುದ್ದೆ ಗಿಟ್ಟಿಸಬೇಕಾದರೆ ಕೋಟಿ ಕಟ್ಟಬೇಕು; ಅಷ್ಟೇ ಅನಾಮತ್ತಾಗಿ ಕೋಟಿ ಪೀಕಬೇಕು. ಸೂಜಿ ಹಾಕಿ ದಬ್ಬಣ ತೆಗೆಯುವ ಕಲೆಯನ್ನು ಕರಗತ ಮಾಡಿಕೊಂಡ ನಿಸ್ಸೀಮರು, ಕೋಟಿಗಟ್ಟಲೇ ಲೂಟಿಗೆ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಳ್ಳುತ್ತಾರೆ.

ADVERTISEMENT

2008–13ರ ಅವಧಿಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಗಡಿ ಲೋಕೋಪಯೋಗಿ ಉಪವಿಭಾಗದಲ್ಲಿ ₹600 ಕೋಟಿ ಮೊತ್ತದ ಕಾಮಗಾರಿಗಳನ್ನು ತುಂಡುಗುತ್ತಿಗೆ ನೀಡಿ, ಭಾರಿ ಅಕ್ರಮ ಎಸಗಲಾಗಿದೆ ಎಂದು ಅಂದು ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ, ಎಚ್‌.ಸಿ. ಮಹದೇವಪ್ಪ ವಿಧಾನಸಭೆ ಅಧಿವೇಶನದಲ್ಲಿ ‘ದೊಡ್ಡ ಸುದ್ದಿ’ ಮಾಡಿದ್ದರು.

ಸದನ ಸಮಿತಿ ರಚನೆಯಾಗಿ ವರದಿಯೂ ಸಲ್ಲಿಕೆಯಾಯಿತು. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಮಹದೇವಪ್ಪ ಲೋಕೋಪಯೋಗಿ ಸಚಿವರಾದರು. ವರದಿಯ ಬಗ್ಗೆ ಚಕಾರವನ್ನೇ ಎತ್ತಲಿಲ್ಲ; ಆರೋಪಕ್ಕೆ ಗುರಿಯಾಗಿದ್ದ ಅಧಿಕಾರಿಗಳೆಲ್ಲ ಆಯಕಟ್ಟಿನ ಹುದ್ದೆಗೇರಿದರು.

ಮಜ್ಜಿಗೆ ವ್ಯಾಪಾರ ಮಾಡುವರೊಬ್ಬರು ಗುತ್ತಿಗೆ ಮಾಡಲಾರಂಭಿಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಸದಸ್ಯರಾದರು. ತಮ್ಮ ತಮ್ಮನ ಹೆಸರಿಗೆ ಗುತ್ತಿಗೆ ವರ್ಗಾಯಿಸಿ ‘ಕಾಮಗಾರಿ’ ಮುಂದುವರಿಸಿದರು. ಬಳಿಕ ಶಾಸಕರಾಗಿ ಸದನದಲ್ಲಿ ಗಟ್ಟಿ ಧ್ವನಿಯನ್ನು ಈಗಲೂ ಎಬ್ಬಿಸುತ್ತಿದ್ದಾರೆ. ಗೌಡ್ರು ಟವೆಲ್‌ ಕೊಡವಿದರೆ ಅಧಿಕಾರಿಗಳ ಟೇಬಲ್ ಕೆಳಗಿಂದ ದುಡ್ಡು ಉದುರುತ್ತದೆ ಎಂಬುದು ಇವರ ಬಗೆಗಿರುವ ಟೀಕೆ.

ಇನ್ನೊಬ್ಬ ಗುತ್ತಿಗೆದಾರರು ಬಹುಕೋಟಿ ಕಾಮಗಾರಿ ನಡೆಸಿದರು. ಇವರು ಮಾಡಿದ ಕಳಪೆ ಕಾಮಗಾರಿಯ ಕಾರಣಕ್ಕೆ ಕಾಂಪೌಂಡ್ ಕುಸಿದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟರು. ಅದೇ ಹೊತ್ತಿನಲ್ಲಿ ಮಹಾನುಭಾವರು ಬಿಬಿಎಂಪಿ ಸದಸ್ಯರಾದರು. ಈಗಲೂ ಸರ್ಕಾರವನ್ನು ನಡುಗಿಸುವ ಪ್ರಭಾವಿ ಶಾಸಕರಲ್ಲಿ ಇವರೂ ಒಬ್ಬರು.

ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳ ಮಧ್ಯೆ ಇರುವ ಈ ಒಳಜಾಲ ಅತ್ಯಂತ ಪ್ರಭಾವಿ. ಕಿರಿಯ ಎಂಜಿನಿಯರ್‌ಗಳಿಂದ ಹಿಡಿದು ಸಚಿವರವರೆಗೆ, ಕೆಲವೊಮ್ಮೆ ಮುಖ್ಯಮಂತ್ರಿಯವರೆಗೂ ‘ಹಫ್ತಾ’ದ ಬೇರುಗಳು ಬೆಸೆದುಕೊಂಡಿವೆ. ಇದಕ್ಕೆ ಪಕ್ಷ
ಭೇದವೂ ಇಲ್ಲ. ಕತ್ತರಿಸಲಾಗದ ವಹಿವಾಟಿನ ಸರಣಿ ಇವರ ಮಧ್ಯೆ ನಡೆಯುತ್ತಿರುವುದು ಜಗಜ್ಜಾಹೀರು.

ಕಾಮಗಾರಿಗಳಿಗೆ ಅಂದಾಜು ಮಾಡಲಾದ ಒಟ್ಟು ಮೊತ್ತದಲ್ಲಿ ಗರಿಷ್ಠ 56 ಪರ್ಸೆಂಟ್‌ವರೆಗೂ ‘ಕಿಕ್‌ಬ್ಯಾಕ್‌’ ನಡೆಯುತ್ತದೆ. ಸಾವಿರ ಕೋಟಿಯ ಮೇಲಿನ ಕಾಮಗಾರಿಗಳಲ್ಲಿ ಪರ್ಸಂಟೇಜ್‌ ಮೊತ್ತ ಶೇ 25ರಿಂದ 30ರವರೆಗೆ ವಿಸ್ತರಿಸುತ್ತದೆ.

ಸಾವಿರ ಕೋಟಿ ಮೇಲಿನ ಕಾಮಗಾರಿಗಳಲ್ಲಿನ ‘ಪಾಲು’ ಸಚಿವರು, ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಎಂಜಿನಿಯರ್‌ ಹಂತದಲ್ಲೇ ‘ವ್ಯವಹಾರ’ ಮುಗಿದು ಹೋಗುತ್ತದೆ. ಟೆಂಡರ್ ಹಾಕುವ ಮುನ್ನವೇ ಮುಂಗಡ ಪಾವತಿಯೂ ಆಗಿರುತ್ತದೆ. ಇಂತಹ ಬೃಹತ್‌ ಕಾಮಗಾರಿಗಳ ಟೆಂಡರ್‌ ಹಿಡಿಯುವ ಬಹುತೇಕ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಗುತ್ತಿಗೆದಾರರು ಉಪ ಗುತ್ತಿಗೆ ಕೊಡುತ್ತಾರೆ. ಈ ಹಂತದಲ್ಲಿ ತಳಹಂತದ ಅಧಿಕಾರಿಗಳು ಪಾಲಿಗಾಗಿ ಕಿತ್ತಾಡುವುದು ಇದೆ.

ಶೇ 25ರಿಂದ ಶೇ 56ರವರೆಗೆ ಪರ್ಸಂಟೇಜ್ ಹೋದರೆ, ಉಳಿಯುವ ಮೊತ್ತದಲ್ಲಿ ತನ್ನ ಲಾಭವನ್ನೂ ಇಟ್ಟುಕೊಂಡ ಗುತ್ತಿಗೆದಾರ ಎಷ್ಟು ಗುಣಮಟ್ಟದ ಕಾಮಗಾರಿ ಮಾಡಬಲ್ಲ? ನಮ್ಮ ರಸ್ತೆಗಳು ಗುಂಡಿ ಬೀಳುವುದಕ್ಕೆ, ನಾಲೆಗಳು ಒಡೆದು ಹೋಗುವುದಕ್ಕೆ, ಸೇತುವೆ ಮುರಿದು ಬೀಳುವುದಕ್ಕೆ ಈ ಪರ್ಸಂಟೇಜ್ ವ್ಯವಹಾರವೇ ಕಾರಣ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನಿಗದಿಯಾದ ಮೊತ್ತದಲ್ಲಿ ಪರ್ಸಂಟೇಜ್‌ ಕಮಾಯಿ ನಡೆಯುತ್ತಿತ್ತು. ಇದು ಕಳಪೆ ಕಾಮಗಾರಿಗೆ ಕಾರಣವಾಗುತ್ತದೆ ಎಂಬ ಕಾರಣ ನೀಡಿ, ಪರ್ಸಂಟೇಜ್ ಮೊತ್ತವನ್ನು ಸೇರಿಸಿ ಕಾಮಗಾರಿಯ ಅಂದಾಜು ಮೊತ್ತವನ್ನು ಲೆಕ್ಕಹಾಕುವ ‘ವ್ಯವಸ್ಥೆ’ ಬಂತು. ನಂತರ ಬಂದ ಸರ್ಕಾರಗಳ ಅವಧಿಯಲ್ಲಿ ಹೊಸ ‘ವ್ಯವಸ್ಥೆಯೇ’ ರೂಢಿಯಾಯಿತು.

ಆಯಕಟ್ಟಿನ ಹುದ್ದೆಗಳ ‘ಖರೀದಿ–ಮಾರಾಟ’ ಪ್ರಕ್ರಿಯೆಯು ಆ ವರ್ಷದ ಬಜೆಟ್‌ನಲ್ಲಿ ಮೀಸಲಾದ ಮೊತ್ತವನ್ನು ಆಧರಿಸಿರುತ್ತದೆ. ಎತ್ತಿನಹೊಳೆ ಯೋಜನೆಗೆ ಈ ವರ್ಷ ₹1,000 ಕೋಟಿ ಸರ್ಕಾರ ನೀಡುತ್ತದೆ ಎಂದಾದರೆ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಎಂಜಿನಿಯರ್‌, ಕಾರ್ಯಪಾಲಕ ಎಂಜಿನಿಯರ್ ಹುದ್ದೆಗೆ ಇರುವ ‘ಕೋಟಿ’ ಬೇಡಿಕೆ ಹೆಚ್ಚಾಗಲಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ₹17,000 ಕೋಟಿ ಕಾಮಗಾರಿ ನಿಗದಿಯಾಗಿತ್ತು. ಅಲ್ಲಿನ ಮುಖ್ಯ ಯೋಜನಾಧಿಕಾರಿ ಹುದ್ದೆ ಕೊಟ್ಟರೆ ಐದು ವರ್ಷದಲ್ಲಿ ₹500 ಕೋಟಿ ಕೊಡುವುದಾಗಿ ಭರವಸೆಯನ್ನೂ ನೀಡಿದ್ದರು. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹುದ್ದೆಯೂ ಇಂತಹದೇ ಬಹುಬೇಡಿಕೆ ಹುದ್ದೆ.

ಹಾಗೆಂದು ಎಂಜಿನಿಯರ್‌ಗಳು ಸುಮ್ಮನೆ ಕೂರುವ ಜಾಯಮಾನದವರಲ್ಲ. ಯಾವುದೇ ಕಾಮಗಾರಿಗಳು ಇಲ್ಲದೇ ಇದ್ದರೂ ದೊಡ್ಡ ಮೊತ್ತದ ಯೋಜನೆಯೊಂದನ್ನು ಸಚಿವರ ಮುಂದೆ ಪ್ರಸ್ತಾಪಿಸುತ್ತಾರೆ. ಅದಕ್ಕಾಗಿ ಅಂದಾಜು ಪಟ್ಟಿ ತಯಾರಿಸುತ್ತಾರೆ. ಇಷ್ಟು ಕೋಟಿ ಮೊತ್ತದ ಕಪ್ಪ ‘ನಿಕ್ಕಿ’ಯಾದ ಮೇಲೆ ಅನಗತ್ಯ ಕಾಮಗಾರಿಗಳಿಗೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿ, ಅನುದಾನವೂ ಬಿಡುಗಡೆಯಾಗುತ್ತದೆ. ಇದು ಈಗ ನಡೆಯುತ್ತಿರುವ ವ್ಯವಹಾರದ ಮಾದರಿ.

ಹೀಗೆ ಕೋಟಿಗಟ್ಟಲೇ ಕೊಟ್ಟು ಬಂದರೂ ಹುದ್ದೆಯೇನೂ ಶಾಶ್ವತವಲ್ಲ. ಆಡಳಿತಾರೂಢ ಪಕ್ಷ ನಡೆಸುವ ರಾಜಕೀಯ ಸಮಾವೇಶ, ಜಾತೀಯ ಸಮಾವೇಶಗಳ ಖರ್ಚು ವೆಚ್ಚ ಭರಿಸುವುದು ಎಂಜಿನಿಯರ್‌ಗಳ ಹೊಣೆ. ಚುನಾವಣೆಗೆ ಹಣ ಹೊಂದಿಸಿಕೊಡುವುದು ಇವರ ಕಾಯಕ.

ಅಷ್ಟು ಮಾತ್ರವಲ್ಲದೇ, ಸಂಬಂಧಪಟ್ಟ ಇಲಾಖೆಯ ಸಚಿವರ ಮಕ್ಕಳ ಮದುವೆಗೆ ಆಭರಣ ಕೊಡಿಸುವುದು, ಮಕ್ಕಳಿಗೆ ದುಬಾರಿ ಮೊಬೈಲ್‌, ಮನೆಯಲ್ಲಿ ನಡೆಯುವ ವೈಭವಯುತ ಕಾರ್ಯಕ್ರಮಗಳಿಗೆ ಊಟದ ವ್ಯವಸ್ಥೆಯಂತಹ ಚಾಕರಿಯನ್ನೂ ಮಾಡಬೇಕು. ಹೀಗೆ ಕೊಡಲು ನಿರಾಕರಿಸಿದರೆ ಹುದ್ದೆಯಿಂದ ಎತ್ತಂಗಡಿಯಾದ ನಿದರ್ಶನಗಳೂ ಇವೆ ಎನ್ನುತ್ತವೆ ಇಲಾಖೆ ಮೂಲಗಳು.

ಕೆಲವು ಎಂಜಿನಿಯರ್‌ಗಳು ಎಷ್ಟು ನಿಪುಣರೆಂದರೆ, ವಿಧಾನಸಭೆ ಚುನಾವಣೆಗೆ ಮುನ್ನವೇ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ವಾಸನೆ ಹಿಡಿಯುತ್ತಾರೆ. ಆ ಪಕ್ಷದ ಪ್ರಭಾವಿಗಳಿಗೆ ಚುನಾವಣೆ ವೆಚ್ಚವನ್ನು(₹2 ಕೋಟಿಯಿಂದ ₹5 ಕೋಟಿವರೆಗೆ) ನೀಡುತ್ತಾರೆ. ಯಾವುದೋ ಒಂದು ಪಕ್ಷ ಅಧಿಕಾರಕ್ಕೆ ಬರುವ ಮುನ್ನವೇ ಮುಂಗಡ ಬುಕ್ಕಿಂಗ್ ಮಾಡುವ ಚಾಳಿಯೂ ಚಾಲ್ತಿಯಲ್ಲಿದೆ.

ಪ್ರಾಮಾಣಿಕರಿಗಿಲ್ಲ ‘ಲಾಭ’ದ ಹುದ್ದೆ

ಈ ಹುದ್ದೆಗೇರಿದವರೆಲ್ಲರೂ ಬಹುಕೋಟಿ ಕೊಟ್ಟೇ ಬಂದಿದ್ದಾರೆ ಎಂದಲ್ಲ. ಸಚಿವರ ಕುಲಬಂಧು ಹಾಗೂ ಸರ್ಕಾರದ ಮೇಲೆ ಪ್ರಭಾವ ಹೊಂದಿದವರು ದಾಕ್ಷಿಣ್ಯಕ್ಕೆ ಪುಕ್ಕಟೆಯಾಗಿ ಹುದ್ದೆ ಪಡೆದವರೂ ಇದ್ದಾರೆ. ಜಾತಿ–ಧನಬಲವಿಲ್ಲದ ಪ್ರಾಮಾಣಿಕರು ಕಾಮಗಾರಿ ನಿರ್ವಹಣೆ, ಹಣ ಬಿಡುಗಡೆಯ ಅಧಿಕಾರ ಇಲ್ಲದ ಆಡಳಿತಾತ್ಮಕ ಹುದ್ದೆಯಷ್ಟೇ ತಮ್ಮ ಪಾಡು ಎಂದು ಸುಮ್ಮನಿರುವುದೂ ಉಂಟು.

ಹುದ್ದೆ ಹಾಗೂದರ ಪಟ್ಟಿ ವಿವರ

ಕಾರ್ಯದರ್ಶಿ, (ಪಿಡಬ್ಲ್ಯುಡಿ, ಜಲಸಂಪನ್ಮೂಲ, ಸಣ್ಣ ನೀರಾವರಿ);₹10 ಕೋಟಿ

ಮುಖ್ಯ ಯೋಜನಾಧಿಕಾರಿ(ಎಸ್‌ಎಚ್‌ಡಿಪಿ,ಕೆಐಎಡಿಬಿ, ಕೆಆರ್‌ಐಡಿಎಲ್‌);₹10 ಕೋಟಿ

ಮುಖ್ಯ ಎಂಜಿನಿಯರ್‌,ಪಿಡಬ್ಲ್ಯುಡಿ, ಬೆಂಗಳೂರು ಕೇಂದ್ರ;₹10ಕೋಟಿ

ಮುಖ್ಯ ಎಂಜಿನಿಯರ್‌,ಪಿಡಬ್ಲ್ಯುಡಿ,ಧಾರವಾಡ, ಕಲಬುರ್ಗಿ;₹5 ಕೋಟಿ


ಮುಖ್ಯ ಎಂಜಿನಿಯರ್‌, ನೀರಾವರಿ;₹5 ಕೋಟಿ

ನೀರಾವರಿ ನಿಗಮಗಳ ಎಂ.ಡಿ.;₹10 ಕೋಟಿ

ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ಪಿಡಬ್ಲ್ಯುಡಿ,ಬೆಂಗಳೂರು;₹1 ಕೋಟಿ

ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ಬೆಂಗಳೂರಿನಿಂದ ಹೊರಗೆ;₹50 ಲಕ್ಷ


ಕಾರ್ಯಪಾಲಕ ಎಂಜಿನಿಯರ್‌, ಬೆಂಗಳೂರು;₹1 ಕೋಟಿ

ಕಾರ್ಯಪಾಲಕ ಎಂಜಿನಿಯರ್‌, ಹೆದ್ದಾರಿ ಯೋಜನೆ, ಬೆಂಗಳೂರು;₹1.25 ಕೋಟಿ


ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಬೆಂಗಳೂರು;₹30 ಲಕ್ಷ

ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಹೆದ್ದಾರಿ ಯೋಜನೆ;₹50 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.