ಆಹಾರ ಮಾದರಿಗಳ ಪರೀಕ್ಷೆಯನ್ನು ಜೆ.ಪಿ. ನಡ್ಡಾ ಪರಿಶೀಲಿಸಿದರು. ಶರಣ ಪ್ರಕಾಶ ಪಾಟೀಲ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಅತಿಯಾಗಿ ಸಂಸ್ಕರಿಸಿದ ಆಹಾರವು ಜೀವಕ್ಕೆ ಅಪಾಯ ತಂದೊಡ್ದುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಪ್ರಕಾರ ದೇಶದಲ್ಲಿ 2050ರ ವೇಳೆಗೆ ಮೂರನೇ ಒಂದರಷ್ಟು ಮಂದಿ ಸ್ಥೂಲಕಾಯ ಸಮಸ್ಯೆಗೆ ಒಳಗಾಗುವ ಸಾಧ್ಯತೆಯಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಕಳವಳ ವ್ಯಕ್ತಪಡಿಸಿದರು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆಹಾರ ಸುರಕ್ಷತೆ ದಿನದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
‘ಸ್ಥೂಲಕಾಯ ಸಮಸ್ಯೆ ವೇಗವಾಗಿ ಬೆಳೆಯುತ್ತಿದೆ. 2008ರಿಂದ 2020ರ ಅವಧಿಯಲ್ಲಿ ಐಸಿಎಂಆರ್ ನಡೆಸಿರುವ ಅಧ್ಯಯನದ ಪ್ರಕಾರ ನಗರ ಪ್ರದೇಶದಲ್ಲಿ ಸ್ಥೂಲಕಾಯ ಶೇ 39.6 ರಷ್ಟು ಹೆಚ್ಚಳವಾದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 23.1 ರಷ್ಟು ಏರಿಕೆಯಾಗಿದೆ. ನಮ್ಮಲ್ಲಿನ ಆಹಾರ ಪದ್ಧತಿ ಹೇಗೆ ಬದಲಾಗಿದೆ ಎನ್ನುವುದಕ್ಕೆ ಈ ಏರಿಕೆ ಉತ್ತಮ ನಿದರ್ಶನ’ ಎಂದರು.
‘ಅತಿಯಾಗಿ ಸಂಸ್ಕರಿಸಿದ ಆಹಾರದ ಬಳಕೆಗೆ ಕಡಿವಾಣ ಹಾಕಬೇಕಿದೆ. ಉತ್ತರಾಖಂಡದಲ್ಲಿ ಅಡುಗೆ ಎಣ್ಣೆ ಬಳಕೆಯನ್ನು ಶೇ 10ರಷ್ಟು ಕಡಿತಮಾಡಲಾಗಿದೆ. ಉಪ್ಪು ಬಳಕೆಯನ್ನೂ ಕಡಿಮೆ ಮಾಡಲಾಗಿದೆ. ಇದು ಜಾಗೃತಿಯಿಂದ ಸಾಧ್ಯವಾಗಿದೆ. ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಎಣ್ಣೆ ಬಳಕೆಯನ್ನು ಕಡಿಮೆ ಮಾಡಬೇಕು. ಈ ಬಗ್ಗೆ ಶಾಲಾ–ಕಾಲೇಜುಗಳಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ. ಸಾಂಪ್ರದಾಯಿಕ ಹಾಗೂ ಸಿರಿಧಾನ್ಯಯುಕ್ತ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡಬೇಕು‘ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ‘ಪ್ರಾಚೀನ ಆಹಾರ ಪದ್ಧತಿ ಅತ್ಯುತ್ತಮವಾದದ್ದಾಗಿದೆ. ಆದರೆ, ಮಕ್ಕಳು ಪಾಶ್ಚಾತ್ಯ ಆಹಾರ ಪದ್ಧತಿಗೆ ಆಕರ್ಷಿತರಾಗುತ್ತಿದ್ದಾರೆ. ರುಚಿ, ಬಣ್ಣಕ್ಕಾಗಿ ಆಹಾರ ಪದಾರ್ಥಗಳಿಗೆ ವಿವಿಧ ನಿಷೇಧಿತ ರಾಸಾಯನಿಕಗಳನ್ನು ಸೇರ್ಪಡೆ ಆಗುತ್ತಿದ್ದು, ಇದನ್ನು ತಡೆಯಲು ಕೇಂದ್ರ, ರಾಜ್ಯ ಸರ್ಕಾರ ಈ ಬಗ್ಗೆ ನಿಗಾವಹಿಸುತ್ತಿದೆ‘ ಎಂದರು.
ಎಫ್‌ಎಸ್‌ಎಸ್‌ಎಐ ಕಾರ್ಯನಿರ್ವಾಹಕ ನಿರ್ದೇಶಕ ಯು.ಎಸ್.ಧ್ಯಾನಿ, ‘ಸರ್ವರಿಗೂ ಸುರಕ್ಷಿತ ಆಹಾರ ಲಭ್ಯವಾಗಬೇಕು. ಆಹಾರ ಪ್ರಯೋಗಾಲಯಗಳ ಜಾಲ ವಿಸ್ತರಣೆ, ಮೊಬೈಲ್ ವಾಹನಗಳ ಕಾರ್ಯಾಚರಣೆ, ತರಬೇತಿ ಸೇರಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ತರಬೇತಿ, ಪರೀಕ್ಷೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ‘ಫುಡ್ ಸೇಫ್ಟಿ ಆನ್ ವೀಲ್ಸ್’ ಮೊಬೈಲ್ ಘಟಕವನ್ನು ಇದೇ ವೇಳೆ ಉದ್ಘಾಟಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.